ಸಿದ್ದರಾಮಯ್ಯ ಸಚಿವರಿಗೆ ದಿಢೀರ್ ಔತಣಕೂಟ ಏರ್ಪಡಿಸಿದ್ದೇಕೆ..?

Siddaramaiah--01

ಬೆಂಗಳೂರು, ಆ.1- ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದು, ಮಾಜಿ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಇಂದು ದಿಢೀರ್ ಔತಣಕೂಟ ಏರ್ಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಷಯದಲ್ಲಿ ಬಹಳಷ್ಟು ಅಸಮಾಧಾನ ಕೇಳಿಬರಲಾರಂಭಿಸಿವೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಜೆಡಿಎಸ್ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವುದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ.

ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಹೆಚ್ಚು ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಆ ಜಿಲ್ಲೆಗೆ ಬಂಡೆಪ್ಪ ಕಾಶೆಂಪೂರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ಡಿ.ಸಿ.ತಮ್ಮಣ್ಣ ಉಸ್ತುವಾರಿ ಸಚಿವರಾಗಿದ್ದಾರೆ. ಬಿಜಾಪುರ ಮತ್ತು ರಾಯಚೂರು ಜಿಲ್ಲೆಗಳು ಕಾಂಗ್ರೆಸ್‍ಗೆ ಮೂಲನೆಲೆಯಾಗಿದ್ದು, ಅಲ್ಲೂ ಕೂಡ ಜೆಡಿಎಸ್‍ನ ಸಚಿವರುಗಳೇ ಉಸ್ತುವಾರಿಗಳಾಗಿ ನಿಯೋಜಿತರಾಗಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ಸಿದ್ದರಾಮಯ್ಯ ವಿರುದ್ಧ ಗೆದ್ದ ಜಿ.ಟಿ.ದೇವೇಗೌಡ ಅವರಿಗೆ ನೀಡಲಾಗಿದೆ. ಕಾಂಗ್ರೆಸ್‍ನ ಭದ್ರಕೋಟೆ ದಾವಣಗೆರೆ ಜಿಲ್ಲೆಗೆ ಎಸ್.ಆರ್. ಶ್ರೀನಿವಾಸ್ ಅವರನ್ನು ನೇಮಿಸಲಾಗಿದೆ. ಇದೇ ರೀತಿ ಜೆಡಿಎಸ್‍ನಲ್ಲೂ ಜಿಲ್ಲಾ ಉಸ್ತುವಾರಿ ಬಗ್ಗೆ ಅಸಮಾಧಾನ ಸೃಷ್ಟಿಯಾಗಿದೆ. ಚಾಮರಾಜನಗರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ಉಸ್ತುವಾರಿಯನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿರುವುದಕ್ಕೆ ಜೆಡಿಎಸ್‍ನಲ್ಲಿ ಅಸಮಾಧಾನಗಳು ವ್ಯಕ್ತವಾಗುತ್ತಿವೆ. ಎಸ್.ಆರ್.ಶ್ರೀನಿವಾಸ್ ಈಗಾಗಲೇ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಇಂದು ಕಾಂಗ್ರೆಸ್‍ನ ಸಚಿವರನ್ನು ಭೋಜನಕೂಟಕ್ಕೆ ಆಹ್ವಾನ ನೀಡಿದ್ದಾರೆ.

ಈ ಮೊದಲು ವಿಧಾನಸಭೆ ಅಧಿವೇಶನ ನಡೆಯುವ ವೇಳೆ ಕಾಂಗ್ರೆಸ್‍ನ ಶಾಸಕರಿಗೆ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿದ್ದರು. ಆಗ ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರು ಔತಣಕೂಟದಿಂದ ಹೊರಗೆ ಉಳಿದಿದ್ದರು. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ಸಂಪುಟದ ಸದಸ್ಯರನ್ನು ಔತಣಕೂಟಕ್ಕೆ ಆಹ್ವಾನಿಸಿರುವುದು ಕುತೂಹಲ ಕೆರಳಿಸಿದೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಹೇಳುವ ಎಲ್ಲಾ ಮಾತುಗಳಿಗೂ ತಲೆಯಾಡಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂಬ ಅಸಮಾಧಾನಗಳು ಕೇಳಿಬರುತ್ತಿವೆ. ಈ ಬಗ್ಗೆ ಕೆಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಭೆ ಮಹತ್ವದ್ದಾಗಿದೆ. ನಿಗಮ ಮಂಡಳಿಗಳಿಗೆ ನೇಮಕಾತಿಗಳು ಆರಂಭಗೊಳ್ಳುತ್ತಿವೆ. ಜೆಡಿಎಸ್ ಸಚಿವರು ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನಿಗಮ ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದರಲ್ಲಿ ಕಾಂಗ್ರೆಸ್ ಶಾಸಕರಿಗೆ ಹಚ್ಚಿನ ಅವಕಾಶ ಸಿಕ್ಕಿಲ್ಲ ಎಂಬ ಮಾತುಗಳಿವೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಮನವೊಲಿಸಬೇಕಾದರೆ ನಿಗಮ ಮಂಡಳಿಯಲ್ಲಿ ಅವಕಾಶ ಕಲ್ಪಿಸುವುದು ಅನಿವಾರ್ಯವಾಗಿದೆ.ಬಹುತೇಕ ಪ್ರಮುಖ ನಿಗಮ ಮಂಡಳಿಗಳು ಜೆಡಿಎಸ್ ಸಚಿವರ ವ್ಯಾಪ್ತಿಯಲ್ಲಿವೆ. ಡಾ.ಜಿ.ಪರಮೇಶ್ವರ್ ಅವರು ನಿಗಮ ಮಂಡಳಿಗಳ ನೇಮಕಾತಿ ಸಂದರ್ಭದಲ್ಲೂ ಪಕ್ಷದ ಪರವಾಗಿ ಧ್ವನಿ ಎತ್ತದೆ ಮೌನವಾಗಿ ಇದ್ದುಬಿಡುವ ಆತಂಕವಿದ್ದು, ಒಂದು ವೇಳೆ ಆ ರೀತಿ ಆದರೆ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುವ ಆತಂಕವಿದೆ.  ಇತ್ತೀಚೆಗೆ ನಡೆದ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ ಶಾಸಕರ ಬೇಡಿಕೆಗೆ ಹೆಚ್ಚಿನ ಮಾನ್ಯತೆ ಸಿಕ್ಕಿಲ್ಲ. ಜೆಡಿಎಸ್‍ನ ಪ್ರಭಾವಿ ಸಚಿವರು ವರ್ಗಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಔತಣಕೂಟದಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರು ಎಐಸಿಸಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹಿನ್ನೆಲೆಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಚಿವರಿಗೆ ಮಾತ್ರ ಆಹ್ವಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಪರಮೇಶ್ವರ್ ಅವರು ಯಾರಿಗೂ ಕೆಟ್ಟವರಾಗದೆ ಅಧಿಕಾರಕ್ಕಾಗಿ ಜೆಡಿಎಸ್ ನಾಯಕರು ಹೇಳುವ ಮಾತುಗಳಿಗೆ ಉಘೇ ಎನ್ನುತ್ತಿರುವುದರಿಂದ ಸಿದ್ದರಾಮಯ್ಯ ಆಡಳಿತಾತ್ಮಕ ವಿಚಾರದಲ್ಲಿ ಅಖಾಡಕ್ಕೆ ಇಳಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ಸಂಪುಟದ ನಿರ್ಧಾರಗಳು, ಅಧಿಕಾರಿಗಳ ವರ್ಗಾವಣೆ, ನಿಗಮ ಮಂಡಳಿ ನೇಮಕಾತಿ ಸೇರಿ ಆಡಳಿತಾತ್ಮಕ ವಿಚಾರಗಳಲ್ಲಿ ತಮ್ಮ ಪಕ್ಷದ ಸಚಿವರಿಗೆ ಹಿತೋಪದೇಶ ಮಾಡಲು ಸಿದ್ದರಾಮಯ್ಯ ಔತಣಕೂಟವನ್ನು ನೆಪವಾಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Sri Raghav

Admin