ಸಿದ್ಧಗಂಗಾಮಠದ ಮಾಜಿ ಉತ್ತರಾಧಿಕಾರಿ ಶ್ರೀ ಗೌರಿಶಂಕರ ಸ್ವಾಮೀಜಿ ನಿಧನ

Gowrishankara-swamiji

ಬೆಂಗಳೂರು, ಜ.11– ಅನಾರೋಗ್ಯದಿಂದ ಬಳಲುತ್ತಿದ್ದ ತುಮಕೂರಿನ ಸಿದ್ಧಗಂಗಾಮಠದ ಮಾಜಿ ಉತ್ತರಾಧಿಕಾರಿ ಶ್ರೀ ಗೌರಿಶಂಕರ ಸ್ವಾಮೀಜಿ (71) ಚಿಕಿತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಶ್ರೀ ಗೌರಿಶಂಕರ ಸ್ವಾಮೀಜಿಗಳು ತುಮಕೂರು ತಾಲೂಕಿನ ಸೀತಕಲ್ಲು ಮೂಲದ ಮುದ್ದಪ್ಪ ಎಂಬುವರ ಪುತ್ರ. ಬಿಇ ಪದವೀಧರರಾಗಿದ್ದ ಇವರು ತಮ್ಮ ವ್ಯಾಸಂಗವನ್ನು ಸಿದ್ಧಗಂಗಾ ಮಠದಲ್ಲಿ ಮಾಡಿದ್ದಾರೆ. ಶ್ರೀಗಳಾಗುವ ಮುನ್ನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅನಾರೋಗ್ಯಕ್ಕೀಡಾಗಿದ್ದ ಅವರು ಹಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ 2.30ರ ಸುಮಾರಿನಲ್ಲಿ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಾರಣಾಂತರಗಳಿಂದ ಶ್ರೀಗಳನ್ನು ಸಿದ್ಧಗಂಗಾ ಮಠದಿಂದ ಹೊರಹಾಕಲಾಗಿತ್ತು. ತಮ್ಮನ್ನು ಉತ್ತರಾಧಿಕಾರಕ್ಕೆ ಮಾನ್ಯ ಮಾಡಬೇಕೆಂದು ಸಿದ್ಧಗಂಗಾ ಮಠದ ವಿರುದ್ಧ ಸುದೀರ್ಘ ಕಾನೂನು ಹೋರಾಟ ಮಾಡಿದ್ದರು.  ಶ್ರೀಗಳು ವಿಧಿವಶದ ಹಿನ್ನೆಲೆಯಲ್ಲಿ ಗೊಲ್ಲಹಳ್ಳಿಯ ಸಿದ್ಧಗಂಗಾ ಜಂಗಮದೇವ ಮಠದಲ್ಲಿ ವೀರಶೈವ ವಿಧಿ-ವಿಧಾನದಲ್ಲಿ ಅಂತ್ಯಕ್ರಿಯೆಯನ್ನು ಭಕ್ತರು ನಡೆಸಲಿದ್ದಾರೆ.
ಕೆಲ ಭಕ್ತರು ಸಿದ್ಧಗಂಗಾ ಮಠದ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಿಸಬೇಕೆಂದು ಹೇಳಿಕೆ ನೀಡಿರುವುದರಿಂದ ಗೊಂದಲ ಉಂಟಾಗಿದ್ದು, ಸಿದ್ಧಗಂಗಾ ಮಠಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಸಿದ್ಧಗಂಗಾ ಮಠಕ್ಕೆ ಶ್ರೀ ಗೌರಿಶಂಕರ ಸ್ವಾಮೀಜಿಯವರ ಪಾರ್ಥಿವ ಶರೀರ ತರುವುದು ಬೇಡ. ಅವರನ್ನು ಇಲ್ಲಿಂದ ಹೊರಹಾಕಲಾಗಿದೆ. ಕೋರ್ಟ್ ಆದೇಶವೂ ಕೂಡ ಇದೆ. ಹಾಗಾಗಿ ಮಠಕ್ಕೆ ತರುವುದು ಬೇಡ ಎಂದು ಮಠದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಹೀಗಾಗಿ ಗೊಲ್ಲಹಳ್ಳಿ ಸಿದ್ಧಗಂಗಾ ಜಂಗಮದೇವ ಮಠದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಶಿಷ್ಯರು ತಿಳಿಸಿದ್ದಾರೆ. ತುಮಕೂರು ತಾಲೂಕು ಸೀತಕಲ್ಲು ಗ್ರಾಮದಲ್ಲಿ 8-9-1946ರಲ್ಲಿ ಜನಿಸಿದ್ದ ಇವರು 1975ರಲ್ಲಿ ಸ್ವಾಮೀಜಿಯಾದರು. 1986ರಲ್ಲಿ ಆರೋಪವೊಂದರಲ್ಲಿ ಇವರು ಮಠದಿಂದ ಆಚೆ ಬಂದರು. 1988ರಲ್ಲಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿ 1990ರಿಂದ ಸತತವಾಗಿ ಇಲ್ಲಿಯವರೆಗೂ ಕೇಸ್ ನಡೆಯುತ್ತಿದೆ. ತುಮಕೂರು ಎರಡನೆ ಹೆಚ್ಚುವರಿ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin