ಸಿದ್ಧಗಂಗಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಾಡುತ್ತಿದೆಯೇ ಜೀವಭಯ..?

Girils

ತುಮಕೂರು, ಆ.31-ಅಕ್ಷರದಾಸೋಹ, ಅನ್ನದಾಸೋಹಕ್ಕೆ ಹೆಸರುವಾಸಿಯಾದ ಕಲ್ಪತರು ನಾಡಿನಲ್ಲಿ ವಿದ್ಯಾರ್ಥಿನಿಯರಿಗೆ ಜೀವಭಯ ಕಾಡುತ್ತಿದೆಯೆ…? ವಿದ್ಯಾರ್ಥಿನಿಯೊಬ್ಬರ ಪೋಷಕರು ತುಮಕೂರಿನ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ಬರೆದಿರುವ ಪತ್ರ ಇಂತಹವೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಿಮ್ಮ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ನನ್ನ ಮಗಳಾದ ಆರ್.ಪರ್ಣಿಕಳಿಗೆ ಮೂವರು ಅನಾಮಧೇಯರು ವಿದ್ಯಾರ್ಥಿನಿಯರ ಸೋಗಿನಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವಂತೆ ಪರ್ಣಿಕಳ ತಂದೆ ಎಚ್.ಎಂ.ರಾಜಶೇಖರಯ್ಯ ಪತ್ರದಲ್ಲಿ ಸವಿವರವಾಗಿ ಬರೆದಿದ್ದಾರೆ.

ಪತ್ರದಲ್ಲೇನಿದೆ..?

ಕಳೆದ ಜೂನ್ 13ರಂದು ನನ್ನ ಮಗಳು ಪರ್ಣಿಕ ಸುಮಾರು 9.50ರಲ್ಲಿ ಕಾಲೇಜಿನ ಮುಂಭಾಗದಲ್ಲಿರುವ ದರ್ಗಾದ ಮುಂದೆ ಬರುತ್ತಿರುವಾಗ ಅದೇ ಕಾಲೇಜಿನ ವಾಣಿಜ್ಯ ವಿಭಾಗದ ಸಮವಸ್ತ್ರ ಧರಿಸಿದ್ದ ಒಬ್ಬ ಅಪರಿಚಿತ ವಿದ್ಯಾರ್ಥಿನಿ ನನ್ನ ಮಗಳನ್ನು ಅಡ್ಡಗಟ್ಟಿ ನಾನು ಓಂಶ್ರೀ ಭಗವತಿ ಪಿಜಿಯಲ್ಲಿದ್ದೇನೆ, ನಿನ್ನ ಜೊತೆ ವ್ಯಾಸಂಗ ಮಾಡುತ್ತಿರುವ ಕಾಂಚನಾ ಮತ್ತು ರಚಿತಾ ನನಗೆ ಗೊತ್ತು. ಅವರು ಕೂಡ ನಮ್ಮ ಪಿ.ಜಿ.ಯಲ್ಲೇ ಇರುವುದು. ಅವರು ನಿಮ್ಮ ನೆಂಟರೇ..? ಎಂಬುದಾಗಿ ವಿಚಾರಿಸಿ ಅವರ ಬಗ್ಗೆ ನಿಮ್ಮ ಜೊತೆ ಮತ್ತಷ್ಟು ಮಾತನಾಡಬೇಕು ಬಾ ಎಂದು ಕಾಲೇಜಿನ ಬಲಭಾಗದಲ್ಲಿರುವ ರಸ್ತೆ ಕಡೆ ನನ್ನ ಮಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.

ದಾರಿಯಲ್ಲಿ ಇನ್ನು ಮೂವರು ಅಪರಿಚಿತ ಯುವತಿಯರು ಸೇರಿಕೊಂಡಿದ್ದನ್ನು ಗಮನಿಸಿದ ನನ್ನ ಮಗಳು ಭಯಭೀತಳಾಗಿ ನಾನು ಕಾಲೇಜಿಗೆ ಹೋಗಬೇಕು ಬಿಟ್ಟುಬಿಡಿ ಅಕ್ಕ ಎಂದು ಗೋಳಾಡಿದರೂ ಕೇಳದೆ ಏಯ್… ನಾನು ಕಾಲೇಜಿಗೆ ಹೋಗಬೇಕು ನೀನೊಬ್ಬಳೇ ಅಲ್ಲ ಹೋಗೋದು… ಬಾ ನಿನ್ನ ಕುಟುಂಬದ ವಿಚಾರ ನನಗೆ ತಿಳಿಸು, ನಾವು ಅದಕ್ಕೆ ನಿನ್ನನ್ನು ಬಲವಂತವಾಗಿ ಕರೆದು ತಂದಿರುವುದು. ನಿನ್ನ ಬಗ್ಗೆ ತಿಳಿದುಕೊಳ್ಳಲು ಕಾಂಚನಾ ಹಾಗೂ ರಚಿತಾಳಿಗೆ ಟಾರ್ಚರ್ ನೀಡಿದ್ದೇವೆ, ಅವರಿಬ್ಬರ ಹಾಗೂ ನಿನ್ನ ವಿಚಾರವನ್ನು ತಿಳಿದುಕೊಳ್ಳಲು ನಮಗೆ ಆಂಟಿಯೊಬ್ಬರು ಸುಪಾರಿ ನೀಡಿದ್ದಾರೆ. ಅದಕ್ಕಾಗಿಯೇ ನಾವು ಪಿ.ಜಿ.ಗೆ ಸೇರಿಕೊಂಡಿರುವುದು. ಬಾಯಿ ಮುಚ್ಚಿಕೊಂಡು ನಾವು ಕೇಳಿದ ಪ್ರಶ್ನೆಗೆ ಉತ್ತರ ಹೇಳಬೇಕೆಂದು ಹೆದರಿಸಿದ್ದಾರೆ.ಇದರಿಂದ ಮತ್ತಷ್ಟು ಭಯಭೀತಳಾದ ಪರ್ಣಿಕ ನೀವೆಲ್ಲ ಯಾರೂ? ನನಗೇಕೆ ಟಾರ್ಚರ್ ನೀಡುತ್ತಿದ್ದೀರಾ..? ಆ ಆಂಟಿ ಯಾರು..? ನಾನೇನು ನಿಮಗೆ ಹೇಳಬೇಕೆಂದು ಕೇಳಿದಾಗ ನಿನ್ನ ಕುಟುಂಬದಲ್ಲಿ ಯಾರ್ಯಾಂರಿದ್ದಾರೆ, ನಿಮಗೆ ಯಾರಾದರೂ ಶತ್ರುಗಳಿದ್ದಾರಾ…? ನಿಮ್ಮ ತಂದೆಗೆ ಎಷ್ಟು ಜನ ಮಕ್ಕಳು..? ನಿನ್ನ ಮನೆ ಎಲ್ಲಿದೆ..? ಎಂದು ಹೆದರಿಸಿ ಇನ್ನು ಒಂದು ತಿಂಗಳೊಳಗೆ ನಿನ್ನನ್ನು ನಾವು ಸಾಯಿಸಿಬಿಡುತ್ತೇವೆ ಇದಕ್ಕಾಗಿ ಆಂಟಿ ಮತ್ತು ಅಣ್ಣ ನಮಗೆ ಕೇಳಿದಷ್ಟು ಹಣ ನೀಡುತ್ತಾರೆ. ನೀನು ಸತ್ತರೆ ಅವರಿಗೆ ಅನುಕೂಲವಾಗುತ್ತದಂತೆ.

ಹೀಗಾಗಿ ನಿನ್ನನ್ನು ನಾವು ಉಳಿಸುವುದಿಲ್ಲ. ಗಲಾಟೆ ಮಾಡಿದರೆ ಮನೆಗೂ ಕಳುಹಿಸುವುದಿಲ್ಲ ಎಂದು ಹೆದರಿಸಿ ಮಧ್ಯಾಹ್ನ 3.30ರವರೆಗೂ ಅದೇ ರಸ್ತೆಯಲ್ಲಿ ಅಲೆದಾಡಿಸಿದರು.
ಈ ಸಮಯಕ್ಕೆ ಸರಿಯಾಗಿ ಕಾಲೇಜು ಬಿಟ್ಟಿದ್ದರಿಂದ ಇತರೆ ವಿದ್ಯಾರ್ಥಿನಿಯರು ಬರುವುದನ್ನು ಕಂಡು ಹೋಗೆ ಇಲ್ಲಿ ನಡೆದಿದ್ದನ್ನು ನಿಮ್ಮ ಮನೆಯವರಿಗೆ ಹೇಳಿದರೆ ನಿನ್ನ ಕಥೆ ಮುಗಿಸುತ್ತೇನೆ ಎಂದು ತಾಕೀತು ಮಾಡಿ ಕಳುಹಿಸಿದ್ದಾರೆ. ಮನೆಗೆ ಬಂದ ಪರ್ಣಿಕ ಭಯದಿಂದ ನಡೆದಿದ್ದೆಲ್ಲವನ್ನೂ ಪೋಷಕರಿಗೆ ತಿಳಿಸಿದ್ದೇ ಅಲ್ಲದೆ ಇನ್ನು ಮುಂದೆ ನಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾಳೆ. ಹೀಗಾಗಿ ಪ್ರಾಂಶುಪಾಲರು ಆ ಅಪರಿಚಿತ ವಿದ್ಯಾರ್ಥಿನಿಯೊಂದಿಗೆ ಕೈ ಜೋಡಿಸಿದ್ದ ಮೂವರು ಆಗುಂತಕಿಯರು ಯಾರು..? ಅವರಿಗೆ ಸುಫಾರಿ ನೀಡಿದ ಆಂಟಿ ಹಾಗೂ ಅಣ್ಣ ಯಾರು..? ಎಂಬುದನ್ನು ಪತ್ತೆ ಹಚ್ಚಿ ನಮ್ಮ ಮಗಳಿಗೆ ರಕ್ಷಣೆ ನೀಡಬೇಕೆಂದು ರಾಜಶೇಖರಯ್ಯ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜಶೇಖರಯ್ಯ ಅವರು ಪ್ರಾಂಶುಪಾಲರಿಗೆ ಬರೆದಿರುವ ಈ ಪತ್ರ ಇದೀಗ ಕಾಲೇಜಿನಲ್ಲಿ ಸಂಚಲನ ಸೃಷ್ಟಿಸಿದೆ. ಕಳೆದ ವರ್ಷ ಕೂಡ ಇದೇ ರೀತಿಯ ಘಟನೆಗಳು ನಡೆದಿದ್ದವು. ಇತರೆ ಹಲವರು ವಿದ್ಯಾರ್ಥಿನಿಯರಿಗೂ ಇಂತಹ ಅನುಭವ ಆಗಿರುವ ವಿಚಾರ ಒಂದೊಂದಾಗಿ ಹೊರಬರತೊಡಗಿವೆ.  ತುಮಕೂರಿನ ಪ್ರತಿಷ್ಠಿತ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅದೇ ಕಾಲೇಜಿನ ಸಮವಸ್ತ್ರ ಧರಿಸಿ ಬಂದು ವಿದ್ಯಾರ್ಥಿನಿಯರಿಗೆ ಜೀವ ಬೆದರಿಕೆವೊಡ್ಡುತ್ತಿರುವ ಆಗುಂತಕಿಯರ ಬಂಧನಕ್ಕೆ ಈಗಾಗಲೇ ಜಾಲ ಬೀಸಲಾಗಿದೆ.

► Follow us on –  Facebook / Twitter  / Google+

Sri Raghav

Admin