ಸಿನಿಮಾದ ಕಾಲ್ಪನಿಕ ಬೃಹತ್ ರೋಬೊಗೆ ಮೂರ್ತ ರೂಪ ನೀಡಿದ ಜಪಾನಿಗರು..!
ರೋಬೊ ಅಥವಾ ಯಂತ್ರಮಾನವರ ತಯಾರಿಕೆಯಲ್ಲಿ ಜಪಾನ್ಗೆ ಸರಿಸಾಟಿ ಇಲ್ಲ. ಯಂತ್ರ ಪರಿಣಿತ ಮಸಾಕಿ ನಗುಮೊ 8.5 ಮೀಟರ್ಗಳಷ್ಟು ಎತ್ತರದ ಬೃಹತ್ ರೋಬೊನನ್ನು ಸೃಷ್ಟಿ ಗಮನ ಸೆಳೆದಿದ್ದಾರೆ. ಈ ಕುರಿತು ಇಲ್ಲೊಂದು ವರದಿ. ವೈಜ್ಞಾನಿಕ ಕಾಲ್ಪನಿಕ ಕಥೆಗಳು ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ದೈತ್ಯಾಕಾರದ ರೋಬೊ-ಗನ್ಡ್ಯಾಮ್, ಜಪಾನಿನ ಮೆಷಿನರಿ ಎಂಜಿನಿಯರ್ ಮಸಾಕಿ ನಗುಮೋ ಅವರಿಗೆ ಪ್ರೇರಣೆಯಾಗಿದೆ. ತನ್ನದೇ ಆದ ಒಂದು ಅಮಿಮೇಷನ್ ಮಾದರಿಯ ಯಂತ್ರ ಮಾನವನನ್ನು ಸೃಷ್ಟಿಸಬೇಕು. ಅದರೊಳಗೆ ಕುಳಿತು ಸವಾರಿ ಮಾಡಬೇಕು ಎಂಬ ಕನಸಿತ್ತು. ಈಗ ಆ ಕನಸು ಸಾಕಾರಗೊಂಡಿದೆ. ಅವರು ಸೃಷ್ಟಿಸಿರುವ 27.9 ಅಡಿಗಳ ಬೃಹತ್ ರೋಬೋಗೆ ಲ್ಯಾಂಡ್ವಾಕರ್ ಮೊನೊನೊಪು ಎಂದು ಹೆಸರಿಟ್ಟಿದ್ದಾರೆ. ಇದರ ತೂಕ ಏಳು ಮೆಟ್ರಿಕ್ ಟನ್ನುಗಳು.ಜಪಾನಿನ ಕೃಷಿ ಯಂತ್ರೋಪಕರಣಗಳ ತಯಾರಿಕಾ ಸಂಸ್ಥೆ-ಸಕಕಿಬಾರಾ ಕಿಕೈಗಾಗಿ ಕಾರ್ಯನಿರ್ವಹಿಸುವ 44 ವರ್ಷದ ಎಂಜಿನಿಯರ್ ನಗುಮೋ ಅದೇ ಯಾಂತ್ರಿಕ ತಂತ್ರಜ್ಞಾನ ಅನ್ವಯಿಸಿ ತನ್ನದೇ ಆದ ರೋಬೊ ವಾಹನ ತಯಾರಿಸಿದ್ದಾರೆ. ಈ ಲ್ಯಾಂ ಡ್ವಾಕರ್ ಮೊನೊನೊಪು ಚಾಲಕ ಕುಳಿತುಕೊಳ್ಳುವ ಒಂದು ಪುಟ್ಟ ಸ್ಥಳ ಹೊಂದಿದೆ. 8.5 ಮೀಟರ್ ಎತ್ತರದ ಶಿರದ ಭಾಗದಲ್ಲಿರುವ ಕಾಕ್ಪಿಟ್ಗೆ ಯಾಂತ್ರಿಕ ಲಿಫ್ಟ್ನಿಂದ ಮಾತ್ರ ಹೋಗಲು ಸಾಧ್ಯ. ಯಂತ್ರ ಮಾನವನ ಕೈ-ಕಾಲುಗಳನ್ನು ನಿಯಂತ್ರಿಸಲು ಮಾನಿಟರ್ಗಳು ಮತ್ತು ಲೀವರ್ಗಳಿವೆ. ಇದರ ಬಲಗೈನಲ್ಲಿ ಒಂದು ಏರ್ಗನ್ ಇದೆ. ಇದು ಗಂಟೆಗೆ 140 ಕಿ.ಮೀ. ವೇಗದಲ್ಲಿ ಸ್ಪಾಂಜ್ ಬಾಲ್ಗಳನ್ನು ಶೂಟ್ ಮಾಡಬಲ್ಲದು. ಮನರಂಜನಾ ಉದ್ದೇಶಕ್ಕಾಗಿ ಈ ದೈತ್ಯ ರೋಬೊ ಸೃಷ್ಟಿಸಲಾಗಿದೆ. ಗಂಟೆಗೆ 930 ಡಾಲರ್ಗಳಿಗೆ ಇದನ್ನು ಬಾಡಿಗೆ ನೀಡಲಾಗುವುದು ಎನ್ನುತ್ತಾರೆ ನಗುಮೋ.