ಸುಪ್ರೀಂಕೋರ್ಟ್ ಆದೇಶ ಖಂಡಿಸಿ ಬೈಕ್ ಜಾಥ

protedte

ಅರಕಲಗೂಡು,ಸೆ.23- ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 4 ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸಿರುವುದನ್ನು ವಿರೋಧಿಸಿ ಇಲ್ಲಿನ ಹೇಮಾವತಿ-ಕಾವೇರಿ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಅರಕಲಗೂಡಿನಿಂದ ಗೊರೂರು ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಕಛೇರಿ ವರೆಗೆ ಬೈಕ್ ರ್ಯಾಲಿ ನಡೆಸಿದರು. ಬೆಳಗ್ಗೆ 10 ಗಂಟೆಯಿಂದಲೇ ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಕನ್ನಡಪರ ಘೋಷಣೆಗಳನ್ನು ಕೂಗುತ್ತಾ, ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು. ನಂತರ ಗೊರೂರು ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಕಛೇರಿ ಎದುರು ಕುಳಿತು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ದ ಘೋಷಣೆಗಳನ್ನು ಕೂಗಿ,ಏಕಪಕ್ಷೀಯ ನಿರ್ಧಾರದ ಕ್ರಮವನ್ನು ಖಂಡಿಸಿದರು.

ಕನ್ನಡ ಹೋರಾಟಗಾರ ರಮೇಶ್ ವಾಟಾಳ್ ಮಾತನಾಡಿ, ಕೇಂದ್ರ ಸರಕಾರ ಕೂಡಲೇ ಮದ್ಯೆ ಪ್ರವೇಶಿಸಿ ಕನ್ನಡಿಗರು ಎದುರಿಸುತ್ತಿರುವ ಸಂಕಷ್ಠಕ್ಕೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದರು.ಮುಖಂಡ ಎನ್.ರವಿಕುಮಾರ್ ಮಾತನಾಡಿ, ಸುಪ್ರೀಂ ಕೋರ್ಟಿನ ತೀರ್ಪು ಕನ್ನಡಿಗರ ಪಾಲಿನ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಅಧ್ಯಕ್ಷ ಬಿ.ಜೆ.ಶ್ರೀನಿವಾಸ, ಜಯಕರ್ನಾಟಕ ಸಂಘಟನೆಯ ಪ್ರಸನ್ನ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಷ್ಣುಪ್ರಕಾಶ್,ಕಾರ್ಯದರ್ಶಿ ನಾಗೇಂದ್ರ,ಜಮೀರ್ ಅಹಮದ್, ಸಾಹಸ್ ಗೌಡ,ಕುಶ,ಎ.ಪಿ.ಶಂಕರ್ ಇತರರು ನೇತೃತ್ವ ವಹಿಸಿದ್ದರು. ಮುಖ್ಯ ಇಂಜಿನಿಯರ್‍ಗೆ ಮನವಿ ಸಲ್ಲಿಸಿದರು.ನಂತರ ಯೋಗಾ ನರಸಿಂಹಸ್ವಾಮಿ ದೇವಾಲಯ ಬಳಿ ಹರಿಯುತ್ತಿರುವ ಜಿಲ್ಲೆಯ ಜೀವನದಿ ಹೇಮಾವತಿ ನದಿಯ ಮಧ್ಯೆ ನಿಂತು ಘೋಷಣೆ ಕೂಗಿದರು. ನಂತರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಮುಂದಿನ ದಿನಗಳಲ್ಲಿ ರಾಜ್ಯಪರ ತೀರ್ಪು ಹಾಗೂ ಮಂಡಳಿ ರಚನೆಯನ್ನು ಕೈಬಿಡುವ ಕುರಿತು ದೇವರು ಕೇಂದ್ರ ಸರಕಾರಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

 

 

► Follow us on –  Facebook / Twitter  / Google+

Sri Raghav

Admin