ಸುಪ್ರೀಂಕೋರ್ಟ್ ಆದೇಶ ಪಾಲನೆ ಹಿನ್ನೆಲೆ 6000ಕ್ಕೂ ಹೆಚ್ಚು ಬಾರ್‍ಗಳಿಗೆ ಬೀಗ…

High-Way

ಬೆಂಗಳೂರು, ಜೂ.7- ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡಬೇಕಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಸುಮಾರು 6 ಸಾವಿರಬಾರ್ ಮದ್ಯದ ಅಂಗಡಿಗಳಿಗೆ ಈ ತಿಂಗಳ ಅಂತ್ಯಕ್ಕೆ ಶಾಶ್ವತ ಬೀಗ ಮುದ್ರೆ ಬೀಳಲಿದೆ.   ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸುಮಾರು 500 ಮೀಟರ್ ಅಂತರದಲ್ಲಿ ಬಾರ್ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಬಾರ ದೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.   ಮಾ.31ರೊಳಗೆ ದೇಶಾದ್ಯಂತ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಬಾರ್ ಅಂಗಡಿಗಳನ್ನು ಮುಚ್ಚಿಸಲು ರಾಜ್ಯ ಸರ್ಕಾರಗಳೇ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ 38 ಬಾರ್ ಅಂಡ್ ರೆಸ್ಟೋರೆಂಟ್‍ಗಳು ಮುಚ್ಚಿವೆ.


ಜೂನ್ 30ರೊಳಗೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಬಾರ್ ಮತ್ತು ರೆಸ್ಟೊರೆಂಟ್‍ಗಳು ಮುಚ್ಚಲೇಬೇಕೆಂದು ಆದೇಶಿಸಿರುವ ಕಾರಣ ರಾಜ್ಯದಲ್ಲಿ ಆರು ಸಾವಿರ ಬಾರ್‍ಗಳು ಕೆಲವೇ ದಿನಗಳಲ್ಲಿ ಬಂದ್ ಆಗಲಿವೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ 2708 ಹಾಗೂ ರಾಜ್ಯ ಹೆದ್ದಾರಿ ಪಕ್ಕ 3,307 ಸೇರಿದಂತೆ ಒಟ್ಟು ಹೆದ್ದಾರಿ ಪಕ್ಕದಲ್ಲಿ 6015 ಬಾರ್ ಅಂಡ್ ರೆಸ್ಟೋರೆಂಟ್‍ಗಳಿವೆ.   ಇದರಲ್ಲಿ ಬೆಂಗಳೂರು ನಗರಕ್ಕೆ ಅತಿ ಹೆಚ್ಚಿನ ನಷ್ಟವಾಗಲಿದೆ. ಬೆಂಗಳೂರು ಪೂರ್ವದ ರಾಷ್ಟ್ರೀಯ ಹೆದ್ದಾರಿಯಲ್ಲಿ 220, ರಾಜ್ಯ ಹೆದ್ದಾರಿಯಲ್ಲಿ 28 ಸೇರಿದಂತೆ ಬೆಂಗಳೂರು ಪಶ್ಚಿಮ ರಾಷ್ಟ್ರೀಯ ಹೆದ್ದಾರಿ 110, ರಾಜ್ಯ ಹೆದ್ದಾರಿ 56 ಸೇರಿದಂತೆ ಒಟ್ಟು 166, ಬೆಂಗಳೂರು ಉತ್ತರ ರಾಷ್ಟ್ರೀಯ ಹೆದ್ದಾರಿ 130, ರಾಜ್ಯ ಹೆದ್ದಾರಿ 73 ಸೇರಿದಂತೆ 203,ಬೆಂಗಳೂರು ದಕ್ಷಿಣ ರಾಷ್ಟ್ರೀಯ ಹೆದ್ದಾರಿ 150, ರಾಜ್ಯ ಹೆದ್ದಾರಿ 145 ಸೇರಿದಂತೆ ಒಟ್ಟು 295 ಬಾರ್ ಅಂಡ್ ರೆಸ್ಟೋರೆಂಟ್‍ಗಳಿದ್ದು ಬೆಂಗಳೂರಿನಲ್ಲಿ ಒಟ್ಟು 912 ಬಾರ್‍ಗಳಿಗೆ ಬೀಗ ಬೀಳಲಿದೆ.


ಇನ್ನು ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ 85 ಹಾಗೂ ರಾಜ್ಯ ಹೆದ್ದಾರಿಯ 340 ಒಟ್ಟು 425, ದಕ್ಷಿಣ ಕನ್ನಡದಲ್ಲಿ ರಾಷ್ಟ್ರೀಯ ಹೆದ್ದಾರಿಯ 174, ರಾಜ್ಯ ಹೆದ್ದಾರಿಯ 122 ಒಟ್ಟು 296, ಹಾಸನ ರಾಷ್ಟ್ರೀಯ ಹೆದ್ದಾರಿ 97, ರಾಜ್ಯ ಹೆದ್ದಾರಿ 159 ಒಟ್ಟು 256, ತುಮಕೂರಿನ ರಾಷ್ಟ್ರೀಯ ಹೆದ್ದಾರಿ 157 ಹಾಗೂ ರಾಜ್ಯ ಹೆದ್ದಾರಿ 91 ಸೇರಿದಂತೆ ಒಟ್ಟು 248 ಬಾರ್ ಅಂಡ್ ರೆಸ್ಟೋರೆಂಟ್‍ಗಳು ಮುಚ್ಚಬೇಕಾದ ಇಕ್ಕಟ್ಟಿಗೆ ಸಿಲುಕಿದೆ.  ಇದೀಗ ಅಬಕಾರಿ ಇಲಾಖೆ ಸುಪ್ರೀಂ ಕೋರ್ಟ್ ಆದೇಶವನ್ನು ಚಾಚುತಪ್ಪದೆ ಪಾಲನೆ ಮಾಡಬೇಕಾಗಿರುವುದರಿಂದ ಈಗಾಗಲೇ ನೋಟಿಸ್ ಜಾರಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Sri Raghav

Admin