ಸುಪ್ರೀಂನಲ್ಲಿ ತಲಾಕ್ ವಿಚಾರಣೆ ಆರಂಭ : ತ್ರಿವಳಿ ತಲಾಕ್ ಮುಸ್ಲಿಮರ ಮೂಲಭೂತ ಹಕ್ಕಾ?
ನವದೆಹಲಿ, ಮೇ 11-ಇಡೀ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ತ್ರಿವಳಿ ತಲಾಕ್ ಸಿಂಧುತ್ವ ಕುರಿತು ಸುಪ್ರೀಂಕೋರ್ಟ್ ಇಂದಿನಿಂದ ವಿಚಾರಣೆ ಆರಂಭಿಸಿದೆ. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್ ಇಸ್ಲಾಂ ಧರ್ಮದ ಮೂಲಭೂತ ತತ್ತ್ವವೇ ಎಂಬ ಬಗ್ಗೆ ತಾನು ಕೂಲಂಕಷ ಪರಿಶೀಲನೆ ನಡೆಸುವುದಾಗಿ ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ. ತ್ರಿವಳಿ ತಲಾಕ್ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಇದು ಜಾರಿಗೊಳಿಸಬಹುದಾದ ಮುಸ್ಲಿಮರ ಮೂಲಭೂತ ಹಕ್ಕಿನ ಒಂದು ಭಾಗವೇ ಎಂಬ ಬಗ್ಗೆ ಪರಾಮರ್ಶೆ ನಡೆಸುವುದಾಗಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಉದಯ್ ಲಲಿತ್ ಮತ್ತು ಅಬ್ದುಲ್ ನಜೀರ್ ಅವರನ್ನೂ ಒಳಗೊಂಡ ಪೀಠ ಈ ಅರ್ಜಿಗಳ ಕುರಿತು ಆರು ದಿನಗಳ ಕಾಲ ವಿಚಾರಣೆ ನಡೆಸಲಿದೆ. ತ್ರಿವಳಿ ತಲಾಕ್ ಇಸ್ಲಾಂ ಧರ್ಮದ ಮೂಲಭೂತ ತತ್ತ್ವವೇ ? ಹಾಗೂ ಇದು ಮುಸ್ಲಿಮರ ಮೂಲಭೂತ ಹಕ್ಕಿನ ಒಂದು ಭಾಗವೇ ಎಂಬ ಎರಡು ವಿಷಯಗಳ ಬಗ್ಗೆ ಸುಪ್ರೀಂ ವಿಚಾರಣೆ ನಡೆಸಲಿದೆ. ಆದರೆ ಮುಸ್ಲಿಮರಲ್ಲಿ ಜಾರಿಯಲ್ಲಿರುವ ಬಹುಪತ್ನಿತ್ವ ವಿಷಯವು ತ್ರಿವಳಿ ತಲಾಕ್ಗೆ ಸಂಬಂಧಪಡದಿರುವ ಅಂಶವಾಗಿರುವುದರಿಂದ ಆ ವಿಚಾರದ ಬಗ್ಗೆ ವಿಚಾರಣೆ ಕೈಬಿಟ್ಟಿದೆ.
ಏಳು ಅರ್ಜಿಗಳ ವಿಚಾರಣೆ ನಡೆಸಲು ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್ ಮತ್ತು ಪಾರ್ಸಿ-ಈ ಸಮುದಾಯಗಳ ನ್ಯಾಯಾಧೀಶರನ್ನು ಈ ನ್ಯಾಯಪೀಠ ಒಳಗೊಂಡಿದೆ. ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಆರೋಪಿಸಿ ಮುಸ್ಲಿಂ ಮಹಿಳೆಯರು ಸಲ್ಲಿಸಿರುವ ಐದು ಅರ್ಜಿಗಳ ಬಗ್ಗೆಯೂ ವಿಚಾರಣೆ ಮುಂದುವರಿಯಲಿದೆ.
ನ್ಯಾಯಪೀಠ ನಡೆಸಲಿರುವ ಎರಡು ವಿಷಯಗಳ ವಿಚಾರಣೆಗಾಗಿ ತಮ್ಮ ವಾದ-ಪ್ರತಿವಾದಗಳನ್ನು ಮಂಡಿಸಲು ಪ್ರತಿಯೊಬ್ಬರಿಗೂ ಎರಡು ದಿನಗಳ ಅವಕಾಶ ನೀಡಲಾಗಿದೆ.
ವಿಚಾರಣೆಯ ಒಂದು ಹಂತದಲ್ಲಿ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು ತ್ರಿವಳಿ ತಲಾಕ್ ಇಸ್ಲಾಂ ಧರ್ಮದ ಭಾಗವಲ್ಲ ಮತ್ತು ಅದು ಮುಸ್ಲಿಂ ಸಮುದಾಯದ ಮೂಲಭೂತ ಹಕ್ಕೂ ಅಲ್ಲ ಎಂದು ಪ್ರತಿಪಾದಿಸಿದರು. ತ್ರಿವಳಿ ತಲಾಕ್ಗೆ ಸಂವಿಧಾನ ಮಾನ್ಯತೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ನೀಡಲಿರುವ ತೀರ್ಪಿನ ಬಗ್ಗೆ ಕುತೂಹಲ ಕೆರಳಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS