ಸುಪ್ರೀಂ ಆದೇಶ ವಿರೋಧಿಸಿ ಜೆಡಿಎಸ್ ಬೈಕ್ ಜಾಥ
ಅರಕಲಗೂಡು, ಸೆ.8- ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಸಂಕಷ್ಟದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.ತಾಲೂಕಿನ ಕೊಣನೂರಿನಿಂದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೈಕ್ ರ್ಯಾಲಿ ಹೊರಟು ರಾಮನಾಥಪುರ, ದೊಡ್ಡಮಗ್ಗೆ, ಅರಕಲಗೂಡು ಮಾರ್ಗವಾಗಿ ತೆರಳಿ ಗೊರೂರಿನ ಹೇಮಾವತಿ ಜಲಾಶಯಕ್ಕೆ ನುಗ್ಗಲೆತ್ನಿಸಿದರು. ತಕ್ಷಣ ಪ್ರತಿಭಟನಾ ನಿರತರನ್ನು ಪೊಲೀಸರು ಗೇಟ್ ಬಳಿ ತಡೆದರು.
ನಂತರ ಹೇಮಾವತಿ ಮುಖ್ಯ ಇಂಜಿನಿಯರ್ಗೆ ಮನವಿ ಸಲ್ಲಿಸಲು ತೆರಳಿದ ಕಾರ್ಯಕರ್ತರನ್ನು ಪೊಲೀಸರು ಅಲ್ಲಿಯೂ ಒಳ ಪ್ರವೇಶಿಸಲು ಬಿಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ಗೊರೂರು ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹೇಮಾವತಿ ಜಲಾಶಯ ಗೇಟ್ ಬಳಿ ಧರಳಿ ಕುಳಿತು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಸುಂಪ್ರೀಂ ಕೋರ್ಟ್ ಆದೇಶದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಕೆಲವರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ರಾಜ್ಯದ ಜಲಾಶಯಗಳಲ್ಲಿ ಲಭ್ಯವಿರುವ ನೀರು ಕುಡಿಯಲು ಸಾಕಾಗುತ್ತಿಲ್ಲ, ಈ ನಡುವೆ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸಲು ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರಲು ಹೊರಟಿರುವುದು ಸರಿಯಲ್ಲ ಎಂದು ಆರೋಪಿಸಿದರು.ರಾಜ್ಯ ಸರ್ಕಾರದ ಎಡವಟ್ಟಿನಿಂದಾಗಿ ಈಗ ಅನ್ನದಾತರು ಕಣ್ಣೀರಿನಲ್ಲಿ ಕೈ ತೊಳೆಯುವ ಸ್ಥಿತಿ ತಂದೊಡ್ಡಿದೆ. ಹೇಮಾವತಿ ಜಲಾಶಯದಿಂದ ನೀರು ಹರಿಸಿ ಅನ್ಯಾಯ ಎಸಗುತ್ತಿದೆ. ಕೂಡಲೇ ಮರು ಪರಿಶೀಲನೆ ಅರ್ಜಿ ಸಲ್ಲಿಸಿ ರೈತರ ಹಿತ ಕಾಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಜೆಡಿಎಸ್ ಮುಖಂಡರಾದ ಎಚ್.ಎಸ್. ಶಂಕರ್, ಸಂತೋಷ್ಗೌಡ, ನರಸೇಗೌಡ, ವೀರೇಶ್, ರಂಗಸ್ವಾಮಿ, ಗೋವಿಂದೇಗೌಡ, ಶ್ರೀನಿವಾಸ್, ಸತೀಶ್ ಮುಂತಾದ ಪ್ರಮುಖರು ಪಾಲ್ಗೊಂಡಿದ್ದರು.