ಸುಪ್ರೀಂ ತೀರ್ಪಿಗೆ ಬದ್ಧರಾಗಿ ನೀರು ಹರಿಸಲಾಗುತ್ತಿದೆ : ಪರಮೇಶ್ವರ್
ತುಮಕೂರು, ಸೆ.11– ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಸರ್ಕಾರಕ್ಕೂ ಅಸಮಾಧಾನವಾಗಿದೆ ಆದರೆ, ತೀರ್ಪಿಗೆ ಬದ್ಧರಾಗಿ ನೀರು ಹರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ಎಲ್ಲಾ ಸಿದ್ಧತೆ ನಡೆಸಿದೆ. ಮುಂದಿನ ರೂಪುರೇಷಗಳ ಬಗ್ಗೆಯೂ ಸಚಿವ ಸಂಪುಟ ಸಭೆ ಕರೆದು ಚರ್ಚಿಸಿ ಮೇಲ್ವಿಚಾರಣಾ ಸಮಿತಿ ಬಳಿ ರಾಜ್ಯದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದೇವೆ ಎಂದು ವಿವರಿಸಿದರು. ಕಾವೇರಿ ನೀರಿನ ಸಂಬಂಧ ಮಂಡ್ಯ ಹಾಗೂ ಕೆಆರ್ಎಸ್ ಸುತ್ತಮುತ್ತ ಭಾರೀ ಪ್ರತಿಭಟನೆ ನಡೆದಿದ್ದು, ಈ ವೇಳೆ ಕೆಆರ್ಎಸ್ ನುಗ್ಗಲು ಪ್ರತಿಭಟನಾಕಾರರು ಮುಂದಾಗಿದ್ದರು. ಕೆಲವರು ನೀರಿಗೆ ಹಾರಲೂ ಯತ್ನಿಸಿದ್ದರು. ಈ ಪರಿಸ್ಥಿತಿ ನಿಭಾಯಿಸಲು, ಆಗುವ ಅನಾಹುತವನ್ನು ತಪ್ಪಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದರು.
ಪ್ರತಿಭಟನೆಗೂ ಮುನ್ನವೇ ರೈತರ ಮೇಲೆ ಯಾವುದೇ ಕಾರಣಕ್ಕೂ ಲಾಠಿಚಾರ್ಜ್ ಮಾಡದಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೆವು. ಆದರೆ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಮುಂದುವರೆದಿದ್ದಾರೆ ಎಂದರು. ಕಳೆದ 35 ವರ್ಷಗಳಿಂದ ಕಾವೇರಿ ವಿವಾದದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲರಾದ ನಾರಿಮನ್ ಅವರು ಸಮಗ್ರ ಮಾಹಿತಿ ಕಲೆಹಾಕಿದ್ದಾರೆ. ಅವರನ್ನು ಏಕಾಏಕಿ ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ವಿಷಯವಾಗಿಯೂ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸೆ.18ರಂದು ನ್ಯಾಯಾ ಧೀಕರಣದ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ ಎಂದು ಪರಮೇಶ್ವರ್ ತಿಳಿಸಿದರು.