ಸುಲಿಗೆ ಮಾಡಿದ್ದ 500ರೂ. ನೋಟುಗಳನ್ನು ಹಿಂದಿರುಗಿಸಿದ ದರೋಡೆಕೋರರು..!
ಗ್ರೇಟರ್ ನೊಯ್ಡಾ, ನ.10-ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಇಬ್ಬರು ದರೋಡೆಕೋರರು ಪರ್ಸ್ನಲ್ಲಿ 500 ರೂ.ಗಳು ಇದ್ದದ್ದನ್ನು ಕಂಡು ಹತಾಶರಾಗಿ ಹಣವನ್ನು ಹಿಂದಿರುಗಿಸಿದ್ದಲ್ಲದೇ, 100 ರೂ.ಗಳನ್ನು ಇಟ್ಟಿಲ್ಲದ ಕಾರಣ ಆತನಿಗೆ ಕಪಾಳಮೋಕ್ಷ ಮಾಡಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ವಿಕಾಸ್ಕುಮಾರ್ ಎಂಬುವರು ನಿನ್ನೆ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದರೋಡೆಕೋರರನ್ನು ಅವರಿಗೆ ಚಾಕು ತೋರಿಸಿ ಬೆದರಿಸಿ ಹಣವಿದ್ದ ಪರ್ಸ್ ಕಸಿದು ಪರಾರಿಯಾದರು. ಆದರೆ, ಸ್ವಲ್ಪ ದೂರ ಹೋದ ನಂತರ ಪರ್ಸ್ನನ್ನು ತಡಕಾಡಿದ ಅವರಿಗೆ ಅದರಲ್ಲಿ 500 ರೂ.ಗಳ ಮೂರು ನೋಟುಗಳು ತಮ್ಮನ್ನು ಅಣಕಿಸುವ ರೀತಿಯಲ್ಲಿ ಇದ್ದದ್ದನ್ನು ನೋಡಿ ದರೋಡೆಕೋರರು ಕುಪಿತರಾದರು.
ಬೈಕ್ನಲ್ಲಿ ಹಿಂದಿರುಗಿ ಆ ವ್ಯಕ್ತಿಯ ಬಳಿ ಬಂದ ಆರೋಪಿಗಳು ಪರ್ಸ್ನನ್ನು ಹಿಂದಿರುಗಿಸಿದರ. 100ರೂ.ಗಳನ್ನು ಏಕೆ ಇಟ್ಟಿಲ್ಲ ಎಂದು ಕೋಪದಿಂದ ಪ್ರಶ್ನಿಸಿ ಕಪಾಳಕ್ಕೆ ಹೊಡೆದು ಪರಾರಿಯಾದರು. ಈ ಬಗ್ಗೆ ವಿಕಾಸ್ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.