ಸುಳ್ಳು ಆರೋಪ, ಟೀಕೆಗೆ ಉತ್ತರ ನೀಡುವ ಅಗತ್ಯವಿಲ್ಲ : ನರೇಂದ್ರಸ್ವಾಮಿ

Spread the love

ಮಳವಳ್ಳಿ, ಫೆ.10- ತಾಲ್ಲೂಕಿನಲ್ಲಿ ಹಲವಾರು ಅಕ್ರಮಗಳನ್ನು ಎಸಗುವವರ ಪರವಾಗಿ ನಿಲ್ಲುವವರೇ ನನ್ನ ಅಭಿವೃದ್ದಿ ಕಾರ್ಯಗಳಿಗೆ ಅನಗತ್ಯ ಟೀಕೆ ಮಾಡುತ್ತ ಸುಳ್ಳು ಪ್ರಚಾರ ನಡೆಸುತ್ತಿದ್ದು, ಇಂತಹ ಸುಳ್ಳು ಆರೋಪ ಟೀಕೆಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ ಅವರು, ಮಳವಳ್ಳಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಕೋಟ್ಯಂತರ ಭ್ರಷ್ಟಾಚಾರ ನಡೆದಿದೆ ಎಂದು ಬೊಬ್ಬೆ ಹೊಡೆಯುವ ಮೂಲಕ ಬಿಟ್ಟಿ ಪ್ರಚಾರ ಪಡೆದುಕೊಳ್ಳುವ ಯತ್ನವನ್ನು ನನ್ನ ವಿರೋಧಿಗಳು ನಡೆಸಿದ್ದರು. ಆದರೆ ಕೆರೆಯ ಹೂಳೆತ್ತಲು ಕೇವಲ 6.50 ಲಕ್ಷ ರೂ.ಮಾತ್ರ ಖರ್ಚಾಗಿದೆ. ಅಂದಮೇಲೆ ಕೋಟಿಗಟ್ಟಲೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿರುಗೇಟು ನೀಡಿದರು.

ಇನ್ನುಳಿದಂತೆ ಸುಮಾರು 25 ಎಕರೆ ಕೆರೆ ಜಾಗ ಒತ್ತುವರಿಯಾಗಿದ್ದನ್ನು ತೆರವುಗೊಳಿಸಲಾಗಿದೆ. ಕೆರೆಯಂಗಳದ ಸೌಂದರ್ಯವನ್ನು ಹೆಚ್ಚಿಸಿ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮೂಲಕ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲಾಗಿದೆ ಇದೆಲ್ಲವೂ ಪಟ್ಟಣದ ಜನತೆಗೋಸ್ಕರ ಮಾಡಲಾಗಿದೆಯೇ ಹೊರತು ನನ್ನ ಹಾಗೂ ನನ್ನ ಕುಟುಂಬದವರ ಮೋಜಿಗಾಗಿ ಅಲ್ಲ ಎಂದು ಹೇಳಿದರು.ಎಷ್ಟೇ ಟೀಕೆ ಮಾಡಿದರೂ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಬಿಡುವುದಿಲ್ಲ. ಒತ್ತುವರಿಯಾಗಿರುವ ಸಾವಿರಾರು ಎಕರೆ ಸರ್ಕಾರಿ ಆಸ್ತಿಯನ್ನು ತೆರವುಗೊಳಿಸುವುದು ಶತಸಿದ್ದ ಎಂದು ಅವರು ತಿಳಿಸಿದರು. ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಲ್ಲಿಕಾರ್ಜುನ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಪುಟ್ಟರಾಮು, ಪುರಸಭಾಧ್ಯಕ್ಷ ರಿಯಾಜಿನ್, ಜಿ.ಪಂ. ಸದಸ್ಯರಾದ ಜಯಾಕಾಂತ ಎಪಿಎಂಸಿ ಅಧ್ಯಕ್ಷ  ಅಂಬರೀಶ್, ಮುಟ್ಟನಹಳ್ಳಿ ದೇವರಾಜು, ತಾಪಂ ಉಪಾಧ್ಯಕ್ಷ ಸಿ.ಮಾದು ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin