ಸುವರ್ಣಸೌಧದಲ್ಲಿ 9 ದಿನಗಳ ಅಧಿವೇಶನ, 49 ಗಂಟೆ ಕಾರ್ಯ ಕಲಾಪ, 13 ವಿಧೇಯಕಗಳು ಅಂಗೀಕಾರ

Session-01

ಬೆಳಗಾವಿ, ಡಿ.3- ಬೆಳಗಾವಿಯ ಸುವರ್ಣಸೌಧದಲ್ಲಿ ಕಳೆದ 10 ದಿನಗಳಿಂದ ನಡೆದ ಚಳಿಗಾಲದ ವಿಧಾನಮಂಡಲ ಅಧಿವೇಶನ ಇಂದು ಪರಿಸಮಾಪ್ತಿಯಾಯಿತು. ನವೆಂಬರ್ 21 ರಿಂದ ಡಿ.3ರವರೆಗೂ ಒಟ್ಟು 9 ದಿನಗಳಲ್ಲಿ 49 ಗಂಟೆ 15 ನಿಮಿಷಗಳ ಕಾಲ ಕಾರ್ಯಕಲಾಪ ನಡೆದಿದೆ. ಕೊನೆ ದಿನವಾದ ಇಂದು ಬಿಜೆಪಿ ಮೊಬೈಲ್ ಅಶ್ಲೀಲ ಚಿತ್ರ ವೀಕ್ಷಿಸಿದ ಆರೋಪಕ್ಕೆ ಗುರಿಯಾಗಿರುವ ಸಚಿವ ತನ್ವೀರ್‍ಸೇಠ್ ರಾಜೀನಾಮೆಗೆ ಆಗ್ರಹಿಸಿ ನಿನ್ನೆಯಿಂದ ಆರಂಭಿಸಿರುವ ಧರಣಿಯನ್ನು ಮುಂದುವರೆಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಗದೀಶ್‍ಶೆಟ್ಟರ್ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯಮಂತ್ರಿಯವರಂತೂ ಉಗ್ರ ಅವತಾರದಿಂದ ಬಿಜೆಪಿ ಶಾಸಕರ ಮೇಲೆ ಪ್ರತಿ ವಾಗ್ದಾಳಿ ನಡೆಸಿದರು. ಗದ್ದಲ ಹೆಚ್ಚಾದಾಗ ಸಭಾಧ್ಯಕ್ಷರು ಕಲಾಪವನ್ನು ಕೆಲಕಾಲ ಮುಂದೂಡಿದರು.

ಹಿಂದೆಯೇ ಪ್ರತಿಪಕ್ಷದ ಶಾಸಕರು ಮುಖ್ಯಮಂತ್ರಿಯವರ ಬಳಿಹೋಗಿ ಅತ್ಯಂತ ಆತ್ಮೀಯತೆಯಿಂದ ಮಾತುಕತೆ ನಡೆಸಿದರು ಮುಖ್ಯಮಂತ್ರಿಯವರು ಅಷ್ಟೇ ಆತ್ಮೀಯತೆಯಿಂದ ಪ್ರತಿಪಕ್ಷದವರನ್ನು ಗದರುವ ಧಾಟಿಯಲ್ಲಿ ಮಾತನಾಡಿಸಿದರು. ಇದು ಈ ಮೊದಲು ನಡೆದ ರಾಜಕೀಯ ವಾಕ್ಸಮರಕ್ಕೆ ತದ್ವಿರುದ್ಧವಾಗಿತ್ತು.  ಬಿಜೆಪಿ ಶಾಸಕರಾದ ಸಿ.ಟಿ.ರವಿ, ಸುನೀಲ್‍ಕುಮಾರ್, ಗೋವಿಂದಕಾರಜೋಳ ಅವರುಗಳು ಮುಖ್ಯಮಂತ್ರಿಯವರ ಜೊತೆ ಅತ್ಯಂತ ಆಪ್ತತೆಯಿಂದ ಮಾತನಾಡಿ ಬಂದಿದ್ದು ಎಲ್ಲರ ಗಮನಸೆಳೆಯಿತು. ಕೊನೆ ದಿನ ಕಲಾಪದಲ್ಲಿ ಶಾಸಕರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಪ್ರಮುಖ ವಿಷಯವನ್ನಿಟ್ಟುಕೊಂಡು ಧರಣಿ ಮಾಡಿದ ಬಿಜೆಪಿ ಪಾಳಯದಲ್ಲಿ ಆರಂಭದಲ್ಲಿ 11 ಮಂದಿ ಶಾಸಕರಿದ್ದರೆ, ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡುವ ವೇಳೆಗೆ 15 ಮಂದಿಯಷ್ಟಾದರು. ಇನ್ನು ಜೆಡಿಎಸ್ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಪಾಳಯದಲ್ಲೂ ಬೆರಳೆಣಿಕೆಯಷ್ಟೇ ಶಾಸಕರು ಹಾಜರಿದ್ದರು. ಬಹಳಷ್ಟು ಸಚಿವರು ಕೂಡ ಸದನದಿಂದ ದೂರ ಉಳಿದಿದ್ದರು.

ಅಂತೂ ಇಂತೂ ಬೆಳಗಾವಿ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಿದ ಸಮಾಧಾನದಿಂದ ಸಭಾಧ್ಯಕ್ಷರು ನಿಟ್ಟುಸಿರು ಬಿಟ್ಟು ಪರಿಸಮಾಪ್ತಿ ವರದಿ ಮಂಡಿಸಿದರು. ಅದರ ಪ್ರಕಾರ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸುಮಾರು 11.34 ನಿಮಿಷದವರೆಗೆ ಚರ್ಚೆಯಾಗಿ 32 ಮಂದಿ ಶಾಸಕರು ಭಾಗಿಯಾಗಿದ್ದರು. ಕಳಸಾ ಬಂಡೂರಿ ವಿಷಯದಲ್ಲಿ 11 ಗಂಟೆ 37 ನಿಮಿಷ ಚರ್ಚೆಯಾಗಿದ್ದು, 20 ಸದಸ್ಯರು ಭಾಗಿಯಾಗಿದ್ದಾರೆ. ಪ್ರಧಾನ ಮಂತ್ರಿಯವರು ಈ ವಿವಾದ ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂಬ ನಿರ್ಣಯವನ್ನು ಸದನ ತೆಗೆದುಕೊಂಡಿದೆ. ಸಿಎಜಿ ವರದಿ, ಬಜೆಟ್ ಸಂಬಂಧಿತ ಕಾಗದಪತ್ರಗಳನ್ನು ಮಂಡಿಸಲಾಗಿದೆ. ಪೂರಕ ಬಜೆಟ್ ಮಂಡನೆಯಾಗಿ ಅಂಗೀಕಾರಗೊಂಡಿದೆ. ಪ್ರಮುಖವಾಗಿ ವಿಧಾನಸಭೆಯ ಕಾರ್ಯಕಲಾಪಗಳ ಸ್ವರೂಪದಲ್ಲಿ ಬದಲಾವಣೆ ತರುವ ನಡಾವಳಿಗಳ ನಿಯಮಾವಳಿ ತಿದ್ದುಪಡಿ ಸಮಿತಿ ವರದಿಯನ್ನು ಮಂಡಿಸಿ ಅಂಗೀಕರಿಸಲಾಗಿದೆ. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ನಿಧಿಯ 5ನೆ ವರದಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ 6ನೆ ವರದಿ, ಅರ್ಜಿಗಳ ಸಮಿತಿಯ 22ನೆ ವರದಿ, ಸರ್ಕಾರಿ ಭರವಸೆಗಳ ಸಮಿತಿಯ 6ನೆ ವರದಿ, ಸದಸ್ಯರ ಖಾಸಗಿ ವಿಧೇಯಕ ಮತ್ತು ನಿರ್ಣಯಗಳ 10 ಮತ್ತು 5ನೆ ವರದಿ, ನೈಸ್ ಹಗರಣದ ಸದನ ಸಮಿತಿ ವರದಿ ಕಲಾಪದಲ್ಲಿ ಮಂಡನೆಯಾಗಿವೆ.

ಸರ್ಕಾರದ ನಿಲುವಳಿ ಸೂಚನೆಯಡಿ 7 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, 4 ಸೂಚನೆಗಳನ್ನು ನಿಯಮ 69ರ ಅನುಸಾರ ಸಾರ್ವಜನಿಕರ ಮಹತ್ವದ ವಿಷಯವನ್ನಾಗಿ ಪರಿವರ್ತಿಸಲಾಗಿದೆ. ಶೂನ್ಯವೇಳೆಯಲ್ಲಿ 32 ವಿಷಯಗಳು ಪ್ರಸ್ತಾಪವಾಗಿವೆ. ನಿಯಮ 351ರಡಿ 120 ಸೂಚನೆಗಳು ಸ್ವೀಕರಿಸಲಾಗಿದ್ದು, 90 ಸೂಚನೆಗಳು ಅಂಗೀಕಾರಗೊಂಡು ಉತ್ತರ ನೀಡಲಾಗಿದೆ.
ಒಂದು ಖಾಸಗಿ ವಿಧೇಯಕವನ್ನು ಸದನದಲ್ಲಿ ಚರ್ಚಿಸಿದ್ದು, ಸರ್ಕಾರದ ಉತ್ತರದ ನಂತರ ಹಿಂಪಡೆಯಲಾಗಿದೆ. 2,527 ಪ್ರಶ್ನೆಗಳ ಪೈಕಿ 2,140 ಪ್ರಶ್ನೆಗಳನ್ನು ಅಂಗೀಕರಿಸಲಾಗಿದೆ. ಸದನದಲ್ಲಿ ಉತ್ತರಿಸುವ 150 ಪ್ರಶ್ನೆಗಳ ಪೈಕಿ 148ಕ್ಕೆ ಉತ್ತರ ಸಿಕ್ಕಿದೆ. 1,938 ಲಿಖಿತ ಪ್ರಶ್ನೆಗಳ ಪೈಕಿ 1,761 ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿದೆ. 52 ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ. 387 ಪ್ರಶ್ನೆಗಳು ಹೆಚ್ಚುವರಿಯಾಗಿವೆ. ನಿಯಮ 73ರಡಿ 214 ಗಮನಸೆಳೆಯುವ ಸೂಚನೆಗಳನ್ನು ಸ್ವೀಕರಿಸಲಾಗಿದ್ದು, 100 ಸೂಚನೆಗಳನ್ನು ಚರ್ಚಿಸಲಾಗಿದೆ.

15 ವಿಧೇಯಕಗಳನ್ನು ಮಂಡಿಸಲಾಗಿದ್ದು, ಧನ ವಿಧೇಯಕವೂ ಸೇರಿ 13 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. 2015ರಲ್ಲಿ ಮಂಡಿಸಲಾದ ಒಂದು ವಿಧೇಯಕವನ್ನು ಹಿಂಪಡೆಯಲಾಗಿದೆ. ಅರ್ಧಗಂಟೆ ಕಾಲಾವಧಿಯ 7 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ಸಮಗ್ರ ವರದಿ ನೀಡಿದರು. ಮತ್ತು ಸುಗಮ ಕಲಾಪಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು. ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin