ಸುವರ್ಣ ಗ್ರಾಮ ಮೊಟಕು : ದತ್ತ ಆರೋಪ
ಕಡೂರು, ಅ.3- ಬಿಜೆಪಿ ಸರ್ಕಾರದಲ್ಲಿ ಜಾರಿಯಾಗಿದ್ದ ಸುವರ್ಣಗ್ರಾಮ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮೊಟಕುಗೊಳಿಸಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ಆರೋಪಿಸಿದರು.ತಾಲ್ಲೂಕಿನ ಎಸ್. ಮಾದಾಪುರ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಯ 75 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.ಗ್ರಾಮವಿಕಾಸ ಎಂಬ ಯೋಜನೆಯ ಮೂಲಕ ಹಳ್ಳಿಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಮೂಗಿಗೆ ತುಪ್ಪ ಸವರುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಸರ್ಕಾರಗಳು ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಲು ಸ್ಪಂದನ ಶೀಲರಾಗಿರಬೇಕು, ಆಡಳಿತದಲ್ಲಿ ಕ್ರಿಯಾಶೀಲ ಸರ್ಕಾರಗಳು ಇದ್ದಾಗ ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದರು.ಜಿಪಂ ಸದಸ್ಯ ಕೆ.ಆರ್. ಮಹೇಶ್ಒಡೆಯರ್ ಮಾತನಾಡಿ, ಸರ್ಕಾರ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ನೀಡುತ್ತಿರುವ ಅನುದಾನ ಅಲ್ಪವಾದದ್ದು ಈ ನಿಟ್ಟಿನಲ್ಲಿ ಶಾಸಕರು ಸದನದಲ್ಲಿ ಪ್ರಸ್ತಾಪಿಸಿ ಹಾಲಿ ನೀಡುತ್ತಿರುವ ಅನುದಾನವನ್ನು 2 ಕೋಟಿ ರೂ.ಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.ಎಸ್.ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾಮಹೇಶ್, ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ಮಧು, ಲೋಹಿತ್, ಮಲ್ಲಿಕಾರ್ಜುನ್, ಶಾರದಮ್ಮ, ಧನಂಜಯ, ಗ್ರಾಮದ ಮುಖಂಡ ಬೀರಪ್ಪ, ನಂಜೇಗೌಡ್ರು, ಹಾಗೂ ಭೂ ವಿಜ್ಞಾನಿ ಇಲಾಖೆಯ ಅಭಿಯಂತರ ವಿರೇಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.