ಸೈಲೆಂಟಾಗಿ ಎಲೆಕ್ಷನ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ ಉಪ್ಪಿ

Spread the love

Upendra-v-02

ದಾವಣಗೆರೆ,ಮಾ.5- ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಜೋರಾಗಿಯೇ ನಡೆಯುತ್ತಿವೆ. ಈ ಮಧ್ಯೆ ಹೊಸ ಪಕ್ಷ ಕಟ್ಟಿರುವ ನಟ, ನಿರ್ದೇಶಕ ಉಪೇಂದ್ರ ಸೈಲೆಂಟಾಗಿಯೇ ಎಲೆಕ್ಷನ್ ಪರೀಕ್ಷೆ ಎದುರಿಸಲು ಸಜ್ಜಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದಾವಣಗೆರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ವ್ಯಯಿಸಿ ಚುನಾವಣೆಯಲ್ಲಿ ಗೆಲ್ಲಬೇಕೆಂಬುದೇ ನನ್ನ ಗುರಿಯಾಗಿದ್ದರೆ ಹೊಸ ಪಕ್ಷ ಕಟ್ಟುವ ಅಗತ್ಯ ಇರುತ್ತಿರಲಿಲ್ಲ. ಇರುವ ಪಕ್ಷಗಳಲ್ಲಿಯೇ ಯಾವುದಾದರೊಂದು ಪಕ್ಷ ಸೇರಬಹುದಿತ್ತು. ಅದೇ ರಾಜಕೀಯಕ್ಕೂ ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ ಎಂದು ನಟ, ನಿರ್ದೇಶಕ ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷದ ರಾಜ್ಯಾಧ್ಯಕ್ಷ ಉಪೇಂದ್ರ ಹೇಳಿದರು.

ಯುವ ಪೀಳಿಗೆ ನಮ್ಮನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ. ಇಂದಲ್ಲ ನಾಳೆ ಬದಲಾವಣೆ ಕಾಣುತ್ತೇವೆ. ಅದಕ್ಕೆ ಸಮಯಾವಕಾಶ ಬೇಕಿದೆ ಎಂದ ಅವರು, ಚುನಾವಣೆಯಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕಿಂಗ್ ಮೇಕರ್ ಆಗುವುದು ಅಧಿಕಾರದ ಉದ್ದೇಶ ನನ್ನದಲ್ಲ ಎಂದು ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ ಅಕಾಂಕ್ಷಿಗಳಿದ್ದು, ಪ್ರಯಾಣಿಕರು, ಬಡವರು ಒಂದು ಟಿಕೆಟ್ ಕೇಳಿದರೆ ನೀಡುತ್ತೇನೆ. ಆದರೆ ಕೆಲಸದ ಮೇಲೆ ಆಸಕ್ತಿವುಳ್ಳವರಾಗಿರಬೇಕು. ಚುನಾವಣೆಯಲ್ಲಿ ಪ್ರಜ್ಞಾವಂತ ಜನರು ಗೆಲ್ಲಿಸಬೇಕೆಂದು ಹೇಳಿದರು. ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆಗೆ ಕ್ಷೇತ್ರದ ಮತದಾರರಿಗೆ ಅವಕಾಶ ನೀಡಬೇಕೆಂಬ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕಲ್ಪನೆ ಅತ್ಯುತ್ತಮವಾಗಿದೆ. ಅಭ್ಯರ್ಥಿಗಳು ಶ್ರೀಗಳ ಪರಿಕಲ್ಪನೆಯನ್ನು ಅನುಸರಿಸುವುದು ಸೂಕ್ತ ಎಂದರು. ಜನರಿಗೆ ಸ್ಪಂದಿಸುವ ಮನಸ್ಥಿತಿಯುಳ್ಳ ಅಭ್ಯರ್ಥಿ ಆಯ್ಕೆ ಆಗಬೇಕು. ಆರೋಪ, ಪ್ರತ್ಯಾರೋಪಗಳನ್ನು ಕೈಬಿಟ್ಟು ಅಭಿವೃದ್ದಿ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಅಭಿಪ್ರಾಯಪಟ್ಟರು.

Facebook Comments

Sri Raghav

Admin