ಸೊಗಡು ಶಿವಣ್ಣ ಮತ್ತು ನಂದೀಶ್ಗೆ ನೋಟಿಸ್ ನೀಡಿರುವುದು ಬೇಸರ ತಂದಿದೆ : ಕೆ ಎಸ್ ಈಶ್ವರಪ್ಪ
ತುಮಕೂರು,ನ.1-ಪಕ್ಷದಲ್ಲಿ ಎಂತೆಂಥಹವರೋ ಅಧಿಕಾರದಲ್ಲಿದ್ದಾರೆ ಆದರೆ ಸೊಗಡು ಶಿವಣ್ಣ ಮತ್ತು ನಂದೀಶ್ಗೆ ನೋಟಿಸ್ ನೀಡಿರುವುದು ಬೇಸರ ತಂದಿದೆ ಎಂದು ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಇಂದಿಲ್ಲಿ ಅಸಮಾಧಾನ ವ್ಯೆಕ್ತಪಡಿಸಿದರು . ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಗೆ ಬೇಟಿ ನೀಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೋಟಿಸ್ ವಿಚಾರದ ಕುರಿತು ನಾನು ಮತ್ತು ಯಡಿಯೂರಪ್ಪ ಈಗಾಗಲೇ ಮಾತನಾಡಿದ್ದು,ಇಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ನೋಟಿಸ್ ವಾಪಾಸ್ ಪಡೆಯುವಂತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ನಮ್ಮ ಗಮನಕ್ಕೆ ಬಾರದೆ ಶಿಸ್ತು ಕಮಿಟಿ ನೋಟಿಸ್ ಜಾರಿ ಮಾಡಿದೆ.ಈ ಹಿಂದೆ ಪಕ್ಷ ವಿರೋಧದ ಹೇಳಿಕೆ ನೀಡಿದರು ಎಂಬ ಕಾರಣಕ್ಕೆ ನೋಟಿಸ್ ನೀಡಲಾಗಿತ್ತು. ಆದರೆ ಪಕ್ಷಕ್ಕಾಗಿ ಶಿವಣ್ಣ ಜೈಲಿಗೆ ಹೋಗಿ ಬಂದವರು ಹಾಗಾಗಿ ನೋಟಿಸ್ ಹಿಂಪಡೆಯಲು ಮಾತನಾಡುತ್ತೇವೆ ಎಂದರು. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಬ್ರಿಗೇಡ್ ನಿಲ್ಲಲ್ಲ ಎಂದ ಅವರು, ಡಿಸೆಂಬರ್ 6 ರಂದು ನಂದಗಡದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು .ಇದಕ್ಕೆ ರಾಜ್ಯದ ವಿವಿಧ ಮಠಾಧೀಶರು ಬೆಂಬಲ ಸೂಚಿಸಿದ್ದು,ಯಡಿಯೂರಪ್ಪ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು .