ಸೋನಿಯಾ, ರಾಹುಲ್ ಕಾಂಗ್ರೆಸ್ ಪಕ್ಷದ ಮಾಲೀಕರಲ್ಲ : ವಿಶ್ವನಾಥ್ ವಾಗ್ದಾಳಿ
ಮಡಿಕೇರಿ, ಜೂ.17-ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾ ಹಾಗೂ ರಾಹುಲ್ ಗಾಂಧಿ ಮಾಲೀಕರೇನಲ್ಲ. ಪಕ್ಷಕ್ಕೆ ಜನರೇ ಮಾಲೀಕರು. ಕಾಂಗ್ರೆಸ್ ಯಾರ ಸೊತ್ತೂ ಅಲ್ಲ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಗುಡುಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಇದೆ. ಇದನ್ನು ಸರಿಪಡಿಸಲು ಯಾರೂ ಮುಂದಾಗಲಿಲ್ಲ. ನನಗೆ ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ ಪಕ್ಷವನ್ನು ನಾನೆಂದಿಗೂ ದೂಷಿಸುವುದಿಲ್ಲ. ಆದರೆ ಪಕ್ಷವನ್ನು ಮುನ್ನಡೆಸುವವರು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಪಕ್ಷ ಬಿಡುತ್ತೇನೆ ಎಂದಾಗ ಏಕೆ ಬಿಡುತ್ತಿದ್ದೀಯ ಎಂದು ಯಾರೊಬ್ಬರು ನನ್ನನ್ನು ಕೇಳಲಿಲ್ಲ. ಪಕ್ಷದಲ್ಲಿನ ಸಮಸ್ಯೆಗಳ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅಂಥವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲೆಗುಂಪು ಮಾಡುತ್ತಾರೆ ಎಂದು ದೂರಿದರು. ಗುಂಡ್ಲುಪೇಟೆ-ನಂಜನಗೂಡು ಉಪಚುನಾವಣೆ ವೇಳೆ ನನ್ನ ಹೆಸರನ್ನು ಕೈಬಿಟ್ಟರು. ಮುಖ್ಯಮಂತ್ರಿ ಪುತ್ರನ ಹೆಸರನ್ನು ಹಾಕಲಾಗಿತ್ತು. ನನ್ನನ್ನು ಬಿಟ್ಟು ಎಐಸಿಸಿ ಸಭೆ ಮಾಡಿಕೊಂಡರು. ಇಷ್ಟೆಲ್ಲ ಅವಮಾನ ಸಹಿಸಿಕೊಂಡು ನಾನು ಕಾಂಗ್ರೆಸ್ ಪಕ್ಷದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.
ನಾನಾಗಲಿ , ನನ್ನ ಮಕ್ಕಳಾಗಲಿ ಯಾವುದೇ ದಂಧೆಯಲ್ಲಿ ತೊಡಗಿಲ್ಲ. ಮರಳು ಗಣಿಗಾರಿಕೆಯಲ್ಲಿ ನನ್ನ ಮಕ್ಕಳ ಹೆಸರು ಕೇಳಿ ಬಂದಿದೆಯೇ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಅವರ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು.
< Eesanje News 24/7 ನ್ಯೂಸ್ ಆ್ಯಪ್ >