ಸೋಮವಾರದಿಂದ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ

Session-Belagavi-01

ಬೆಂಗಳೂರು, ನ.19- ಇದೇ 21ರಿಂದ ಆರಂಭವಾಗಲಿರುವ 132ನೇ ವಿಧಾನಮಂಡಲ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ 10 ದಿನಗಳ ಕಾಲ ನಡೆಯಲಿದೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, 21ನೇ ತಾರೀಖಿ ನಂದು ಆರಂಭವಾಗುತ್ತಿದ್ದು , ಡಿಸೆಂಬರ್ 2ರವರೆಗೆ ನಡೆಯಲಿದೆ. ಕನ್ನಡಿಗರ ಏಕೀಕೃತ ಭಾವದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಸುವರ್ಣ ಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ನಿರೀಕ್ಷಿತ ವಿಷಯ ಗಳ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ ಎಂಬ ಮಾಹಿತಿ ಇದೆ ಎಂದರು. ರಾಜ್ಯದಲ್ಲಿ ಹಿಂಗಾರು ಹಾಗೂ ಮುಂಗಾರು ಕೈಕೊಟ್ಟು ತೀವ್ರ ಸಮಸ್ಯೆ ಎದುರಾಗಿದೆ. ಬರಗಾಲ ಕುರಿತಂತೆ ಚರ್ಚೆ ಎದುರಾಗುವ ಸಾಧ್ಯತೆ ಇದ್ದು ಯಾವುದೇ ವಿಧೇಯಕಗಳು ಮಂಡನೆಯಾಗುವ ಬಗ್ಗೆ ಮಾಹಿತಿ ಇಲ್ಲ. ವಿಧೇಯಕಗಳು ಮಂಡನೆಯಾಗಬೇಕಿದ್ದಲ್ಲಿ ಒಂದು ವಾರದ ಮೊದಲು ಗಮನಕ್ಕೆ ತರುವಂತೆ ಸಲಹೆ ಮಾಡಿದ್ದೇವೆ. ಆದರೆ ಇವರೆಗೂ ಈ ಸಲಹೆ ಜಾರಿಗೆ ಬಂದಿಲ್ಲ ಎಂದರು.

ಪ್ರತಿದಿನ ಬೆಳಗ್ಗೆ 11ರಿಂದ 2 ಗಂಟೆವರೆಗೆ ಹಾಗೂ 3ರಿಂದ 6ಗಂಟೆವರೆಗೆ ಅಧಿವೇಶನ ನಡೆಸಬೇಕು, ಕಲಾಪ ಸಲಹಾ ಸಮಿತಿ ಮಂಡಿಸಿರುವ ನಿಯಮದಂತೆ ಇದೇ ಅವಧಿಯಲ್ಲಿ ಕಲಾಪ ನಡೆಸಬೇಕು ಎಂಬ ನಿರ್ಧಾರ ಕೈಗೊಂಡು ಪ್ರಸ್ತಾವನೆ ಮಂಡಿಸಬೇಕು ಎಂದರು.  ಅನ್ವರ್ ಮಾಣಿಪ್ಪಾಡಿ ವರದಿ ಕುರಿತಂತೆ ಪ್ರತಿಕ್ರಿಯಿಸಿದ ಅವರು ವರದಿ ಮಂಡನೆ ಸಂಸದೀಯ ಮಂಡನೆ ಕಡ್ಡಾಯವಲ್ಲ. ಆದರೆ ನೈತಿಕತೆ ಪ್ರಶ್ನೆಯಿದೆ ಎಂದರು.  ಕೆಲವೊಮ್ಮೆ ಸದನದಲ್ಲಿ ಶಾಸಕರು ಗಲಾಟೆ ಮಾಡಿದ ಪ್ರಸಂಗಗಳು ನಡೆದಿವೆ. ಅದೇ ರೀತಿ ಗುಣಾತ್ಮಕ ಕಲಾಪಗಳು ನಡೆದಿವೆ. ಇವು ಇನ್ನಷ್ಟು ಉತ್ತಮಗೊಂಡು ಚರ್ಚೆಗಳು ನಡೆಯುವ ಅಗತ್ಯವಿದೆ.

ಶಾಸಕರ ವೇತನ ಪರಿಷ್ಕರಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ ಎಂದ ಅವರು, ಒಟ್ಟು 1267 ಪ್ರಶ್ನೆಗಳು ಸ್ವೀಕೃತವಾಗಿದ್ದು , 245 ಚುಕ್ಕೆ ಗುರುತಿನ ಪ್ರಶ್ನೆಗಳು, 1022 ಚುಕ್ಕೆ ರಹಿತ ಪ್ರಶ್ನೆಗಳು, 146 ಗಮನ ಸೆಳೆಯುವ ಪ್ರಶ್ನೆಗಳು, 330ನೇ ಸೂಚನೆ ಮೇರೆಗೆ 54 ಸೂಚನೆಗಳು ಸ್ವೀಕಾರವಾಗಿವೆ ಎಂದು ವಿವರಿಸಿದರು.  ನಿಲುವಳಿ ಸೂಚನೆಗೆ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ನಂತರ ಚರ್ಚೆಗೆ ಅವಕಾಶ ನೀಡಬೇಕೆಂಬುದು ನಮ್ಮ ಆಶಯ ಎಂದರು.

ನೋಟು ಬದಲಾವಣೆ ಸಮಸ್ಯೆಯಾಗಿಲ್ಲ:

ನೋಟು ಬದಲಾವಣೆ ಕುರಿತಂತೆ ಯಾವುದೇ ಸಮಸ್ಯೆಯಾಗಿಲ್ಲ. ಸಾಮಾನ್ಯರಂತೆ ನಾನು 12 ಸಾವಿರ ರೂ.ಗಳನ್ನು ನ.9ರಂದು ಬ್ಯಾಂಕ್‍ನಲ್ಲಿ ಬದಲಾವಣೆಗೆ ಕಳುಹಿಸಿದಾಗ ಗುರುತಿನ ಚೀಟಿ ಹಾಗೂ ಪಾನ್‍ಕಾರ್ಡ್ ನೀಡುವಂತೆ ಸೂಚಿಸಿದ್ದರು. ಅದನ್ನು ನೀಡಿದ ನಂತರ 4 ಸಾವಿರ ರೂ. ಬದಲಾವಣೆ ಮಾಡಿಕೊಟ್ಟು ಉಳಿದ ಹಣವನ್ನು ಖಾತೆಗೆ ಜಮೆ ಮಾಡಿದ್ದಾರೆ. 2000 ರೂ. ಚಲಾವಣೆಗೆ ಚಿಲ್ಲರೆ ಸಮಸ್ಯೆ ಉಂಟಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಬದಲಾವಣೆ ಮಾಡಿಕೊಂಡಿದ್ದೇನೆ. ಉಳಿದಂತೆ ಇನ್ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.

► Follow us on –  Facebook / Twitter  / Google+

Sri Raghav

Admin