ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿ ಕಂಗಲಾಗಿದ್ದ ಕರಾವಳಿ ಯುವಕರ ರಕ್ಷಣೆ, ಶೀಘ್ರ ತಾಯ್ನಾಡಿಗೆ

Punith-And-Damodar

ರಿಯಾದ್/ನವದೆಹಲಿ, ಮೇ 24– ದೊಡ್ಡ ಸಂಬಳದ ಆಸೆಯಿಂದ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿ ಮರುಭೂಮಿಯಲ್ಲಿ ಗುಲಾಮರಂತೆ ಕುರಿ ಕಾಯುವ ಕೆಲಸಕ್ಕೆ ನಿಯೋಜಿಸಲ್ಪಟ್ಟು ಹೈರಾಣಾಗಿದ್ದ ಕರಾವಳಿಯ ಇಬ್ಬರು ಯುವಕರನ್ನು ಇಂಡಿಯನ್ ಸೋಷಿಯಲ್ ಪೋರಂ ಅಲ್ ಗಸೀಂ(ಐಎಫ್‍ಎಸ್) ರಕ್ಷಿಸಿದೆ. ಈ ಸಂತ್ರಸ್ತ ಯುವಕರು ಶೀಘ್ರ ತಾಯ್ನಾಡಿಗೆ ಹಿಂದಿರುಗಲಿದ್ದಾರೆ.   ಇದು ಕರಾವಳಿಯ ಮುಲ್ಕಿ ಸಮೀಪದ ಕಾರ್ನಾಡಿನ ಪುನೀತ್ ಮತ್ತು ಗಂಜಿಮಠದ ದಾಮೋದರ್ ಅವರ ಕರುಣಾಜನಕ ಕಥೆ. ತೀವ್ರ ಬಡತನದಲ್ಲಿದ್ದ ಕುಟುಂಬದ ರಕ್ಷಣೆಗಾಗಿ ಉದ್ಯೋಗ ಅರಸುತ್ತಿದ್ದ ಈ ತರುಣರಿಗೆ ಮಂಗಳೂರಿನ ಸಂಸ್ಥೆಯೊಂದು ಸೌದಿ ಅರೇಬಿಯಾದಲ್ಲಿ ಕೈತುಂಬಾ ಸಂಬಳದ ಕೆಲಸ ನೀಡುವ ಆಶ್ವಾಸನೆ ನೀಡಿತು. ಸೌದಿಯಲ್ಲಿ ಪೇಂಟರ್‍ಗಳಿಗೆ ಮೆಸ್ತ್ರಿಯಾಗಿ ನಿಯೋಜಿಸಿಕೊಳ್ಳುವುದಾಗಿ ಹೇಳಿ ಅವರನ್ನು ಅಲ್ಲಿಗೆ ಕಳುಹಿಸಿ ಕೊಡಲಾಗಿತ್ತು.2016ರ ಡಿಸೆಂಬರ್‍ನಲ್ಲಿ ರಿಯಾದ್‍ಗೆ ತೆರಳಿದ ಪುನೀತ್ ಮತ್ತು ದಾಮೋದರ್ ಅವರನ್ನು ಅಲ್ಲಿನ ಪ್ರಾಯೋಜಕರು ಪೇಂಟರ್ ಮೇಸ್ತ್ರಿ ಉದ್ಯೋಗ ನೀಡುವ ಬದಲು ಬೇರೆ ಕೆಲಸಕ್ಕೆ ನಿಯೋಜಿಸಿದರು. ಬುರೈವಾ ಎಂಬ ಘೋರ ಮರುಭೂಮಿಯಲ್ಲಿ ಸುಡು ಬಿಸಿಲಿನಲ್ಲಿ ಕುರಿ ಕಾಯುವ (ಮಝ್ರ) ಕೆಲಸಕ್ಕೆ ಪುನೀತ್ ಮತ್ತು ದಾಮೋದರ್ ಅವರನ್ನು ಕಳುಹಿಸಿತ್ತು. ಭಾರೀ ನಿರಾಸೆಯೊಂದಿಗೆ ಅನ್ಯಮಾರ್ಗವಿಲ್ಲದೇ ಮರುಭೂಮಿಯಲ್ಲಿ ಗುಲಾಮರಂತೆ ಕುರಿಗಾಹಿ ಕೆಲಸ ಮಾಡ ತೊಡಗಿದರು. ಇವರಿಗೆ ಸರಿಯಾದ ಊಟೋಪಚಾರ ಮತ್ತು ಇತರ ಸೌಲಭ್ಯಗಳು ಸಹ ಇರಲಿಲ್ಲ. ಅಲ್ಲದೇ ಸಂಬಳವನ್ನು ಸರಿಯಾಗಿ ನೀಡುತ್ತಿರಲಿಲ್ಲ. ಜನ ಸಂಪರ್ಕವೇ ಇಲ್ಲದೇ ನಿರ್ಜನ ಮರುಭೂಮಿಯಲ್ಲಿ ದಿನದೂಡಿದರು.

ಸೌದಿಯಲ್ಲಿ ತಮಗೆ ಬಂದೊದಗಿರುವ ಕಷ್ಟಕಾರ್ಪಣ್ಯಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ತಮ್ಮನ್ನು ಸಂಕಷ್ಟದಿಂದ ಪಾರು ಮಾಡುವಂತೆ ಕೋರಿದ್ದರು. ಪೋಷಕರು ಈ ಸಂಬಂಧ ವಿದೇಶಿ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ಮನವಿ ಮಾಡಿದ್ದರು. ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲೆಂದೇ ಆರಂಭವಾಗಿರುವ ವಿದೇಶಾಂಗ ಸಚಿವಾಲಯದ ಮದತ್ ವೆಬ್‍ನಲ್ಲೂ ಈ ಬಗ್ಗೆ ದೂರು ದಾಖಲಾಗಿತ್ತು.   ಇದೇ ವೇಳೆ ಯುವಕರು ಮೊಬೈಲ್ ಫೋನ್‍ಗಳಿಂದ ತಮ್ಮ ಸಂಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮದ ಗಮನಕ್ಕೆ ತಂದರು.

ಮಾಧ್ಯಮ ವರದಿಗಳಿಂದ ಎಚ್ಚೆತ್ತ ಇಂಡಿಯನ್ ಸೋಷಿಯಲ್ ಪೋರಂನ ಕಾರ್ಯಕರ್ತರು ಬುರೈವಾ ಮರುಭೂಮಿಗೆ ತೆರಳಿ ಪುನೀತ್ ಮತ್ತು ದಾಮೋದರ್ ಅವರನ್ನು ಸಂಪರ್ಕಿಸಿ ವಿವರ ಪಡೆದರು. ಅಲ್ಲದೇ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತರುಣರನ್ನು ಪಾರು ಮಾಡಲು ಮನವಿ ಮಾಡಿದರು. ಇವರ ಪರಿಶ್ರಮದ ಫಲವಾಗಿ ಯುವಕರ ವಿಮೋಚನೆಗೆ ಅಲ್ಲಿನ ರಾಯಭಾರಿ ಕಚೇರಿ ಸಮ್ಮತಿಸಿದೆ. ಇವರನ್ನು ಭಾರತಕ್ಕೆ ಸುರಕ್ಷಿತವಾಗಿ ಕಳುಹಿಸುವ ಪ್ರಕ್ರಿಯೆ ಮುಂದುವರಿದಿದ್ದು, ಶೀಘ್ರ ಇವರು ಹಟ್ಟೂರಿಗೆ ಹಿಂದಿರುಗಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin