ಸ್ಟೀಲ್ ಬ್ರಿಡ್ಜ್ ಬೇಕೇ-ಬೇಕು, ಡೋಂಗಿ ರಾಜಕಾರಣ ಬಿಡಿ, ಅಭಿವೃದ್ಧಿ ಮಾಡಿ
ಯಲಹಂಕ, ಮಾ.6- ರಾಜಕೀಯ ಬಿಟ್ಟು ಅಭಿವೃದ್ಧಿಗೆ ಹೊಡೆದಾಡಿ, ನಂಬಿಕೆ ಇಟ್ಟು ಆಯ್ಕೆ ಮಾಡಿರುವ ಸಾರ್ವಜನಿಕರಿಗೆ ಕನಿಷ್ಠ ಸೌಲಭ್ಯನೀಡಿ ಎಂದು ಕರ್ನಾಟಕ ಅಭಿವೃದ್ಧಿ ಮತ್ತು ಅನುಷ್ಠಾನ ಸಮಿತಿ ಸದಸ್ಯರು ಹೆಬ್ಬಾಳದ ಡೈರಿ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ಬೆಂಗಳೂರು ಉತ್ತರ ಭಾಗದ ಎಲ್ಲಾ ನಾಗರಿಕರಿಗೆ ಈಗಾಗಲೇ ವಾಹನ ದಟ್ಟಣೆಯಿಂದ ಸಾಕಷ್ಟು ತೊಂದರೆ ಆಗುತ್ತಿದ್ದು ಉಕ್ಕಿನ ಸೇತುವೆ ಅಗತ್ಯ ಇದ್ದೇಇದೆ. ದಯಮಾಡಿ ರಾಜಕೀಯ ಪಕ್ಷಗಳು ಅಧಿಕಾರದ ಆಸೆಗಾಗಿ ತಂತಮ್ಮಲ್ಲಿ ಕೆಸರರೆಚಾಟ ಬಿಟ್ಟು ಸಾರ್ವಜನಿಕರನ್ನು ಪರಿಗಣಿಸಿ, ಬಸವೇಶ್ವರ ವೃತ್ತದಿಂದ ಕೆಂಪಾಪುರ ಗೇಟ್ವರೆಗೆ ನಿರ್ಮಾಣಗೊಳ್ಳಬೇಕಿದ್ದ ಉಕ್ಕಿನ ಸೇತುವೆ ಸ್ಥಗಿತಗೊಳಿಸಿರುವುದರಿಂದ ಸಾಕಷ್ಟು ತೊಂದರೆಯಾಗಿದ್ದು, ಉತ್ತರ ಭಾಗದ ಜನರಷ್ಟೇ ಅಲ್ಲ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಬೆಂಗಳೂರಿಂದ ಹೊರಹೋಗುವ ಎಲ್ಲಾ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ ಎಂದು ದೂರಿದರು.
ದಯಮಾಡಿ ಸ್ಥಗಿತಗೊಳಿಸುವ ಮುನ್ನ ಸಾರ್ವಜನಿಕರನ್ನು ಪರಿಗಣಿಸಿ ಮತ್ತೆ ಕಾಮಗಾರಿ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿದರು. ಕಿರಿದಾದ ರಸ್ತೆಗಳಲ್ಲಿನ ವಾಹನ ದಟ್ಟಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಡೋಂಗಿ ರಾಜಕಾರಣದ ನೆಪದಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡಲಾಗಿರುವ ತೆರಿಗೆ ಹಣ ಪೋಲು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ವಿ.ಹರಿ, ಅಧ್ಯಕ್ಷ ಬೆ.ಎಂ.ದೇವರಾಜ್, ಆರ್.ಬಾಲರಾಜ್, ಎ.ಶಿವರಾಮ ಶೆಟ್ಟಿ, ಹಂನುಮಂತರಾಜ್, ದಿಲೀಪ್ ಸೇರಿ ಅನೇಕ ಹಿರಿಯ ಮುಖಂಡರು ಭಾಗವಹಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >