ಸ್ಮಶಾನ ಜಾಗ ಅತಿಕ್ರಮಣ : ಗ್ರಾಮಸ್ಥರ ಆಕ್ರೋಶ

tipturu

ತಿಪಟೂರು, ಸೆ.22- ತಾಲ್ಲೂಕಿನ ಕರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿರುವ ಸ್ಮಶಾನವನ್ನು ಅಕ್ರಮವಾಗಿ ಕೆಲವರು ಉಳುಮೆ ಮಾಡಿಕೊಂಡಿದ್ದು, ಈ ಬಗ್ಗೆ ಗ್ರಾಪಂ ಹಾಗೂ ತಹಸೀಲ್ದಾರ್‍ಗೆ ಹಲವು ಬಾರಿ ದೂರು ಸಲ್ಲಿಸಿದರೂ ಕ್ರಮಕೈಗೊಳ್ಳದೆ ಕಂದಾಯಾಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಂದಾಯ ಇಲಾಖೆ ವತಿಯಿಂದ ಸರ್ವೆ ನಂ. 36ರಲ್ಲಿ 10ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಅಕ್ರಮವಾಗಿ ಉಳುಮೆ ಮಾಡಿಕೊಂಡು ಸ್ಮಶಾನವೇ ಇಲ್ಲದಂತಾಗಿದ್ದು, ಗ್ರಾಮಸ್ಥರು ಶವಸಂಸ್ಕಾರಕ್ಕೆ ಎಲ್ಲಿಗೆ ಹೋಗಬೇಕು ಎಂಬುದು ಪ್ರಶ್ನೆಯಾಗಿದೆ.
ಸ್ಮಶಾನ ಸರ್ಕಾರದ ಜಮೀನು ಎಂದು ಉಳುಮೆ ಮಾಡಿಕೊಂಡು ಅಕ್ರಮವಾಗಿ ಜಮೀನನ್ನು ತಮ್ಮದಾಗಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ ಸ್ಮಶಾನವಿದ್ದರೂ ಪ್ರಯೋಜನಪಡೆದುಕೊಳ್ಳಲಾಗದೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.  ತಹಶೀಲ್ದಾರ್ ಅವರು 3-4ದಿನದಲ್ಲಿ ಬಂದು ಸ್ಮಶಾನವನ್ನು ಗ್ರಾಮಸ್ಥರ ಉಪಯೋಗಕ್ಕೆ ಬಿಡಿಸಿಕೊಡದಿದ್ದರೆ ಗ್ರಾಮದಲ್ಲಿ ಯಾರೇ ಸತ್ತರೂ ತಹಶಿಲ್ದಾರ್ ಕಚೇರಿ ಮುಂದೆ ಶವಸಂಸ್ಕಾರ ಮಾಡಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಕ್ರಮವಾಗಿ ಸ್ಮಶಾನ ಉಳುಮೆ ಮಾಡುತ್ತಿರುವವರ ವಿರುದ್ದ ಕ್ರಮಕೈಗೊಂಡು, ಸ್ಮಶಾನವನ್ನು ಗ್ರಾಮಕ್ಕೆ ಬಿಡಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

► Follow us on –  Facebook / Twitter  / Google+

Sri Raghav

Admin