ಹಂತಕರನ್ನು ಕೂಡಲೇ ಪತ್ತೇ ಹಚ್ಚಿ ಬಂಧಿಸಬೇಕು : ಜಗದೀಶ್ ಶೆಟ್ಟರ್

Jagadish-Shettar-01

ಬೆಂಗಳೂರು. ಸೆ.05 : ಹಿರಿಯ ಪತ್ರಕರ್ತೆ, ಸಾಹಿತಿ, ಚಿಂತಕಿ ಹಾಗೂ ದಿ. ಲಂಕೇಶ್ ಅವರ ಪುತ್ರಿ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಸರ್ಕಾರ ಕೂಡಲೇ ಪತ್ತೇ ಹಚ್ಚಿ ಬಂಧಿಸಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಒತ್ತಾಯಿಸಿದ್ದಾರೆ. ಸಾಹಿತಿ ಎಂ.ಎಂ. ಕಲಬುರಗಿ ಹತ್ಯೆ ಮಾಸುವ ಮುನ್ನವೇ ಆಗುಂತಕರು ಗೌರಿ ಲಂಕೇಶ್ ಅವರನ್ನು ಭಯನಾಕವಾಗಿ ಕೊಲೆ ಮಾಡಿರುವುದು ರಾಜ್ಯದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ ಎಂದು ದೂರಿದ್ದಾರೆ.

ಈ ಘಟನೆಯಲ್ಲಿ ಯಾರೇ ಭಾಗಿಯಾಗಿರಲೀ. ಸರ್ಕಾರ ಕೊಲೆಪಾತಕರನ್ನು ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕು. ಜನಸಾಮಾನ್ಯರಿಗೂ ರಕ್ಷಣೆ ನೀಡದ ಈ ಸರ್ಕಾರದಲ್ಲಿ ಪತ್ರಕರ್ತರು, ಸಾಹಿತಿಗಳನ್ನು ಹಾಡು ಹಾಗಲೇ ಭಯನಕಾಗಿ ಕೊಲೆ ಮಾಡುತ್ತಾರೆ ಎಂದರೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನೆಸಿದ್ದಾರೆ. ಪದೇ ಪದೇ ಗೃಹ ಸಚಿವರನ್ನು ಬದಲಾಯಿಸುವುದು, ಪೊಲೀಸರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ದುಷ್ಕರ್ಮಿಗಳಿಗೆ ಹೇಳುವವರು, ಕೇಳುವವರೂ ಇಲ್ಲದಂತಾಗಿದೆ.

ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಗೂ ಗೃಹ ಸಚಿವ ರಾಮಲಿಂಗಾರೆಡ್ಡಿ ಇದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಕೊಲೆಗಡುಕರನ್ನು ಬಂಧಿಸಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ದ ರಾಜ್ಯದಾದ್ಯಾಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Sri Raghav

Admin