ಹಕ್ಕಿಪಿಕ್ಕಿ ಜನಾಂಗಕ್ಕೆ ಪೊಲೀಸರಿಂದ ಕಿರುಕುಳ ತಪ್ಪಿಸಲು ಮನವಿ

ತುಮಕೂರು, ಮಾ.11-ನಗರದ ಯಲ್ಲಾಪುರ ಗ್ರಾಮದಲ್ಲಿ ಕಳೆದ 10-12 ವರ್ಷಗಳಿಂದ ಗುಡಿಸಲು ಹಾಕಿಕೊಂಡು ವಾಸವಿರುವ 50-60 ಹಕ್ಕಿಪಿಕ್ಕಿ ಕುಟುಂಬಗಳು ಮನೆಯ ಅಲಂಕೃತ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದು, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ  ಕರ್ನಾಟಕ ಬಹುಜನ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹಕ್ಕಿಪಿಕ್ಕಿ ಕುಟುಂಬದವರು ಪ್ರತಿಭಟನೆ ನಡೆಸಿದರು.ನಾವು ವಾಸವಿರುವ ಗುಡಿಸಲುಗಳ ಬಳಿ ನಮ್ಮ ಕುಟುಂಬದ ಗಂಡಸರುಗಳು ವ್ಯಾಪಾರಕ್ಕೆಂದು ಹೊರ ಹೋಗಿರುವ ಸಮಯದಲ್ಲಿ ಬಂದ ಪೊಲೀಸರು,ಗುಡಿಸಲ ಬಳಿ ಇದ್ದ ಮಹಿಳೆಯರು ಮತ್ತು  ವಯಸ್ಸಾದವರನ್ನು ನೀವು ಯಾರು, ಏಕೆ ಇಲ್ಲಿದ್ದೀರಿ,ಏನು ಕೆಲಸ ಮಾಡುತ್ತೀರಿ,ನಿಮ್ಮ ಗಂಡಂದಿರೆಲ್ಲಿ ಎಂದು ಪ್ರಶ್ನಿಸುತ್ತಾರೆ.

ನಾವು ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿಲ್ಲ.ನಮ್ಮ ಜೀವನಕ್ಕೆ ಅಲಂಕಾರಿಕ ವಸ್ತುಗಳ ಮಾರಾಟವನ್ನೇ ಅಲಂಬಿಸಿರುತ್ತೇವೆ. ಸರಕಾರದಿಂದ ಇದುವರೆಗೂ ನಮಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ.  ಸೂರುಗಳು ಇಲ್ಲದೆ ಅತಂತ್ರದ ಬದುಕು ನಡೆಸುತ್ತಿದ್ದು, ಜಿಲ್ಲಾಡಳಿತ ಗಮನ ಹರಿಸಿ ನಮಗೆ ರಕ್ಷಣೆ ಒದಗಿಸುವುದರ ಜೊತೆಗೆ, ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಪ್ರತಿಭಟನಾ ನಿರತ ಹಕ್ಕಿಪಿಕ್ಕಿ ಸಮುದಾಯದವರು ಆಗ್ರಹಿಸಿದರು.ಕರ್ನಾಟಕ ಬಹುಜನ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಕರ್ನಾಟಕ ರಸ್ತೆ ಬದಿ ವ್ಯಾಪಾರಗಳ ಸಂಘದ ರಾಜ್ಯಾಧ್ಯಕ್ಷ ಬಾಬಾ, ಕೆ.ಬಿ.ಎಸ್.ಎಸ್.ನ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಅಪ್ಪಾಜಿ, ಭಾವೇಶ್, ಕೇಶವ, ಕುಮಾರ್, ಈಶರೆಡ್ಡಿ, ರೂಪೇಶ್, ಬಿರಂದರಾಜು, ನವೀನಕುಮಾರ್ ಮತ್ತಿತರರು ಭಾಗವಹಿಸಿದ್ದರು.

 

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin