ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರ ಗುಡಿಸಲು ತೆರವಿಗೆ ಮನವೊಲಿಕೆ

Beluru2

ಬೇಲೂರು, ಫೆ.8- ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರ ಕುಂದು-ಕೊರತೆ ಆಲಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ್ ಹಾಗೂ ಸಕಲೇಶಪುರ ಉಪ ವಿಭಾಗಾಧಿಕಾರಿ ಶಿವರಾಜ್ ಅವರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಹೊನ್ನೇನಹಳ್ಳಿ ಕಾವಲಿನಲ್ಲಿರುವ ಅವರ ಗುಡಿಸಲುಗಳನ್ನು ತೆರವುಗೊಳಿಸಲು ಮನವೊಲಿಸಿದರು.
ನಂತರ ಮಾತನಾಡಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಶೋತ್ತಮ್, ಆಧಿವಾಸಿ ಹಾಗೂ ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ಒಂದು ಮಂಡಳಿ ಹಾಗೂ ಪ್ಯಾಕೇಜ್ ವ್ಯವಸ್ಥೆ ಇದ್ದು ಆ ಪ್ಯಾಕೇಜ್‍ನ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಿಸಲು ಬದ್ಧರಾಗಿದ್ದೇವೆ. ಅಲ್ಲದೆ ನಿಮ್ಮ ಗ್ರಾಮಕ್ಕೆ ನಮ್ಮ ಅಧಿಕಾರಿಗಳು ಬಂದು ಪ್ರತಿಯೊಂದು ಮನೆಯನ್ನು ಸರ್ವೆ ನಡೆಸಿ ಯಾರಿಗೆ ಮನೆ ನಿವೇಶನವಿಲ್ಲ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಸರ್ಕಾರಕ್ಕೆ ಕಳುಹಿಸಿ ನಿಮ್ಮಗಳ ಅಭಿವೃದ್ದಿಗೆ ಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಡುವುದಕ್ಕೆ ಮುಂದಾಗಲಿದ್ದೇವೆ ಎಂದು ತಿಳಿಸಿದರು.

ಸಕಲೇಶಪುರ ಉಪ ವಿಭಾಗಾಧಿಕಾರಿ ಶಿವರಾಜ್, ಮೂಲ ಭೂತ ಸೌಲಭ್ಯಗಳನ್ನು ಕೊಡುವುದಕ್ಕೆ ಸಮೀಕ್ಷೆ ನಡೆಸಿ ಸರ್ಕಾರದ ಗಮನಕ್ಕೆ ತಂದು ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ತಿಳಿಸಿದ ಅವರು ನಿಮ್ಮಲ್ಲಿಯೆ ನಾಲ್ಕು ಜನರ ಸದಸ್ಯರ ತಂಡ ರಚಿಸಿ ನಮ್ಮ ಸಮಿತಿಯಲ್ಲಿ ನಡೆಯುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಆದ್ದರಿಂದ ತಕ್ಷಣವೆ ಉಳಿದಿರುವ ಗುಡಿಸಲುಗಳನ್ನು ತೆರವುಗೊಳಿಸಿ ಕಾನೂನಾತ್ಮಕವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸಲು ಸಹಕರಿಸಬೇಕು ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ತಹಸೀಲ್ದಾರ್ ಪುಟ್ಟಶೆಟ್ಟಿ, ವೃತ್ತ ನಿರೀಕ್ಷಕ ಲೋಕೇಶ್, ಪಿಎಸ್‍ಐ ಬಾಲು, ಸುಬ್ಬಯ್ಯ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin