ಹಠಮಾರಿ ಬಿಎಸ್‍ವೈ-ಈಶು ನಡುವೆ ಸಂಧಾನಕ್ಕೆ ಆರೆಸ್ಸೆಸ್ ಬಂದ ಧುರೀಣರು

Eshwarappa

ಬೆಂಗಳೂರು,ಅ.10-ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ನಡುವಿನ ಮುನಿಸು ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿರುವ ಕಾರಣ ಸಂಘ ಪರಿವಾರದ ನಾಯಕರು ಮಧ್ಯಪ್ರವೇಶಕ್ಕೆ ಮುಂದಾಗಿದ್ದಾರೆ.  ಶೀಘ್ರದಲ್ಲೇ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಸಂಧಾನ ನಡೆಸಲಿರುವ ಆರ್‍ಎಸ್‍ಎಸ್‍ನ ಹಿರಿಯ ನಾಯಕರು ಸರ್ವರಿಗೂ ಸಮ್ಮತವಾದ ಸೂತ್ರವೊಂದನ್ನು ಹೆಣೆಯಲಿದ್ದಾರೆ.  ಈಗಾಗಲೇ ಉಭಯ ನಾಯಕರ ನಡುವೆ ಸಂಧಾನಕ್ಕೆ ವೇದಿಕೆ ಸಿದ್ಧವಾಗಿದ್ದು , ಆರ್‍ಎಸ್‍ಎಸ್ ನಾಯಕರು ಸೂಚಿಸುವ ಹಿರಿಯರೊಬ್ಬರು ಬಿಕ್ಕಟ್ಟು ಶಮನಕ್ಕೆ ಸಂಧಾನ ನಡೆಸುವರು.

ಕಳೆದವಾರ ರಾಜ್ಯಕ್ಕೆ ಆಗಮಿಸಿದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‍ಲಾಲ್ ನಡೆಸಿದ ಸಂಧಾನ ವಿಫಲವಾಗಿತ್ತು. ಪಕ್ಷದ ಚಿಹ್ನೆಯಡಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟಿಸುವಂತೆ ಸೂಚನೆ ಕೊಟ್ಟಿದ್ದರು.  ಯಾರೊಬ್ಬರು ವೈಯಕ್ತಿಕ ನೆಲೆಗಟ್ಟಿನಲ್ಲಿ ಪ್ರತ್ಯೇಕ ಸಂಘಟನೆಗಳನ್ನು ಮಾಡಬಾರದು, ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿಕೆ ನೀಡಿದ್ದರು. ಆದರೂ ಪಟ್ಟು ಬಿಡದ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಂದುವರೆಸುವುದಾಗಿ ಸವಾಲು ಹಾಕಿದ್ದರು.  ಹೀಗೆ ದಿನದಿಂದ ದಿನಕ್ಕೆ ಇದು ಪಕ್ಷಕ್ಕೆ ಹಾನಿ ಮಾಡುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸಂಘ ನಾಯಕರು ಇಬ್ಬರ ನಡುವೆ ರಾಜೀ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಅರುಣ್‍ಕುಮಾರ್ ಬೇಡ:

ಈ ಮೊದಲು ಆರ್‍ಎಸ್‍ಎಸ್ ನಾಯಕರು ಹಿರಿಯ ಮುಖಂಡ ಅರುಣ್‍ಕುಮಾರ್ ಅವರನ್ನು ಸಂಧಾನಕಾರರನ್ನಾಗಿ ನೇಮಕ ಮಾಡಿದ್ದರು. ಆದರೆ ಇದಕ್ಕೆ ಈಶ್ವರಪ್ಪ ಅಪಸ್ವರ ತೆಗೆದಿದ್ದರಿಂದ ಅವರು ಹಿಂದೆ ಸರಿದಿದ್ದರು. ಹೀಗಾಗಿ ಉಭಯ ನಾಯಕರ ನಡುವೆ ಉತ್ತಮ ಸಂಬಂಧ ಹೊಂದಿರುವ ಹಿರಿಯರೊಬ್ಬರು ಮಾತುಕತೆ ನಡೆಸಲಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಆರ್‍ಎಸ್‍ಎಸ್ ಈ ಹಿರಿಯ ಮುಖಂಡರು ದೆಹಲಿ ಮಟ್ಟದಲ್ಲೂ ಪ್ರಭಾವಿ ನಾಯಕರಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಾಕಷ್ಟು ಆತ್ಮೀಯ ಒಡನಾಟ ಹೊಂದಿದ್ದಾರೆ.  ಇದೀಗ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮುಸುಕಿನ ಗುದ್ದಾಟಕ್ಕೆ ಅಂತ್ಯ ಹಾಡಲು ಆರ್‍ಎಸ್‍ಎಸ್‍ನ ಪ್ರಭಾವಿ ನಾಯಕರು ಎಷ್ಟರಮಟ್ಟಿಗೆ ಸಂಧಾನ ನಡೆಸಲಿದ್ದಾರೆ ಎಂಬುದು ಬಿಜೆಪಿ ವಲಯದಲ್ಲಿ ಕುತೂಹಲ ಕೆರಳಿಸಿದೆ.  ಏಕೆಂದರೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಂದೇ ಜಿಲ್ಲೆಯವರಾದರೂ ತಮ್ಮ ಹಠಮಾರಿ ಸ್ವಭಾವದಿಂದ ಹಿಂದೆ ಸರಿಯುವವರಲ್ಲ.

► Follow us on –  Facebook / Twitter  / Google+

Sri Raghav

Admin