ಹಣಕ್ಕಾಗಿ ಸ್ನೇಹಿತರಿಂದಲೇ ಕೊಲೆಯಾದ ಐಟಿ ಅಧಿಕಾರಿ ಪುತ್ರ

Spread the love

Sharat--01

ಬೆಂಗಳೂರು, ಸೆ.22-ಇವ್ರು ನೋಡೋದಕ್ಕೆ ತುಂಬಾ ಟೆರರ್ ಆಗಿದ್ದಾರೆ. ಇವ್ರ ಬಳಿ ಭಾರೀ ವೆಪನ್ಸ್ ಇವೆÉ. ಅವ್ರ ಬೇಡಿಕೆ ಈಡೇರಿಸಿ… ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡಬೇಡಿ. ನೀಡಿದ್ರೆ ನನ್ನನ್ನ ಕೊಲೆ ಮಾಡ್ತಾರೆ. ನಂತ್ರ ನನ್ನ ಅಕ್ಕನನ್ನೂ ಹತ್ಯೆ ಮಾಡುವ ಸಾಧ್ಯತೆ ಇದೆ. ಪ್ಲೀಸ್ ಹೇಗಾದ್ರೂ ಮಾಡಿ ನನ್ನ ಕಾಪಾಡಿ…. ಎಂದು ಮನೆಯವರಿಗೆ ವಾಟ್ಸಪ್ ವಿಡಿಯೋ ಕಳುಹಿಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿ ನಿರಂಜನ್‍ಕುಮಾರ್ ಪುತ್ರ ಶರತ್ ಕೊಲೆಯಾಗಿದ್ದಾನೆ.  19 ವರ್ಷದ ಶರತ್‍ನನ್ನು ಅಪಹರಿಸಿ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದವರು ಆತನ ಅಕ್ಕನ ಸಹಪಾಠಿ (ಕ್ಲಾಸ್‍ಮೇಟ್) ಮತ್ತು ಆತನ ಸ್ನೇಹಿತರು ಎಂಬುದು ಗಮನಾರ್ಹ.

ಹಣದಾಸೆಗೆ ತನ್ನ ಸಹಪಾಠಿಯ ತಮ್ಮನನ್ನೇ ಕಿಡ್ನ್ಯಾಪ್ ಮಾಡಿ 50ಲಕ್ಷ ಒತ್ತೆ ಹಣಕ್ಕೆ ಬೇಡಿಕೆ ಇಟ್ಟು, ನಂತರ ಎಲ್ಲಿ ತಮ್ಮ ಕೃತ್ಯ ಬಯಲಾಗುವುದೋ ಎಂದು ಹೆದರಿ ಶರತ್‍ನನ್ನು ಕೊಲೆ ಮಾಡಿ ಶವವನ್ನು ಕೆರೆಗೆ ಎಸೆದು ಮತ್ತೆ ನಂತರ ಶವ ಹೊರತೆಗೆದು ಹೂತು ಹಾಕಿದ್ದ ನಾಲ್ವರು ನರಹಂತಕರನ್ನು ಬಂಧಿಸಿ ನಿಗೂಢವಾಗಿದ್ದ ಅಪಹರಣ ಮತ್ತು ಕೊಲೆ ಪ್ರಕರಣ ಭೇದಿಸುವಲ್ಲಿ ಜ್ಞಾನಭಾರತಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಶಾಲ್ (21), ವಿನಯ್‍ಪ್ರಸಾದ್(23), ಕರಣ್‍ಪೈ(22) ಮತ್ತು ವಿನೋದ್‍ಕುಮಾರ್ (22) ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಕ್ಯಾಬ್ ಚಾಲಕ ಪರಾರಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ:

ಕೊಲೆ ಪ್ರಕರಣದ ಪ್ರಮುಖ ಸೂತ್ರಧಾರಿ ವಿಶಾಲ್ ವಿದ್ಯಾರ್ಥಿಯೂ ಆಗಿದ್ದು, ಆರ್‍ಟಿಒ ಕಚೇರಿಯಲ್ಲಿ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ. ಈತ ಶರತ್‍ನ ಅಕ್ಕನ ಸಹಪಾಠಿಯಾಗಿದ್ದು, ಇವರ ಕುಟುಂಬಕ್ಕೆ ಬಹಳ ಆತ್ಮೀಯನಾಗಿದ್ದು, ಆಗಾಗ್ಗೆ ಮನೆಗೆ ಬಂದು ಎಲ್ಲರ ಸ್ನೇಹ ಗಳಿಸಿದ್ದ. ವಿಶಾಲ್ ತನ್ನ ಅಕ್ಕನ ಗಂಡ ಮಾಡಿದ್ದ 4 ಲಕ್ಷ ಸಾಲ ತೀರಿಸುವ ಉದ್ದೇಶದಿಂದ ತನ್ನ ಸಹಪಾಠಿ ಸಹೋದರನಾದ ಆಚಾರ್ಯ ಇನ್ಸ್‍ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಟೋಮೊಬೈಲ್ ಎಂಜಿನಿಯರ್ ವಿದ್ಯಾರ್ಥಿ ಶರತ್‍ನನ್ನು ಕಿಡ್ನ್ಯಾಪ್ ಮಾಡಿ ಹಣ ಪಡೆಯಬಹುದೆಂಬ ಉದ್ದೇಶದಿಂದ ಚಾಲಕ ವೃತ್ತಿ ಮಾಡುತ್ತಿದ್ದ ಸ್ನೇಹಿತ ವಿನಯ್ ಪ್ರಸಾದ್, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕರಣ್‍ಪೈ, ವಿನೋದ್‍ಕುಮಾರ್ ಹಾಗೂ ಮತ್ತೊಬ್ಬನೊಂದಿಗೆ ಸೇರಿ ಸೆ.12 ರಂದು ಉಪಾಯವಾಗಿ ಶರತ್‍ನನ್ನು ಕರೆಸಿಕೊಂಡು ಕಾರಿನಲ್ಲಿ ಅಪಹರಿಸಿದ್ದರು.

ಕೊಲೆ ನಡೆದಿದ್ದು ಹೀಗೆ:

ಅಪಹರಣಕಾರರು ಶರತ್ ಮೂಲಕ ಐಟಿ ಅಧಿಕಾರಿ ಮನೆಗೆ ವಾಟ್ಸಪ್ ವಿಡಿಯೋ ಸಂದೇಶ ರವಾನಿಸಿದ್ದರು. ಆ ಸಂದೇಶದಲ್ಲಿ ಶರತ್, ಇವ್ರು ನೋಡೋದಕ್ಕೆ ತುಂಬಾ ಟೆರರ್ ಆಗಿದ್ದಾರೆ. ಇವ್ರ ಬಳಿ ಭಾರೀ ವೆಪನ್ಸ್ ಇವೆÉ. ಅವ್ರ ಬೇಡಿಕೆ ಈಡೇರಿಸಿ… ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡಬೇಡಿ. ನೀಡಿದ್ರೆ ನನ್ನನ್ನ ಕೊಲೆ ಮಾಡ್ತಾರೆ. ನಂತ್ರ ನನ್ನ ಅಕ್ಕನನ್ನೂ ಹತ್ಯೆ ಮಾಡುವ ಸಾಧ್ಯತೆ ಇದೆ. ಪ್ಲೀಸ್ ಹೇಗಾದ್ರೂ ಮಾಡಿ ನನ್ನ ಕಾಪಾಡಿ ಎಂದು ಗೋಳಾಡಿದ್ದ.
ಈ ಸಂದೇಶ ನೋಡಿ ಐಟಿ ಅಧಿಕಾರಿ ಮನೆಯವರು ಪೊಲೀಸರಿಗೆ ದೂರು ನೀಡೋದಿಲ್ಲ. ತಮ್ಮ ಮಗನ ಪ್ರಾಣ ಉಳಿಸಿಕೊಳ್ಳಲು 50ಲಕ್ಷ ರೂ. ಒತ್ತೆ ಹಣ ನೀಡುತ್ತಾರೆ. ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದೇ ಅಪಹರಣಕಾರರು ಭಾವಿಸಿದ್ದರು.

ಆದರೆ ಶರತ್ ತಂದೆ ನಿರಂಜನ್‍ಕುಮಾರ್ ತಮ್ಮ ಪುತ್ರನ ಅಪಹರಣವಾಗಿದೆ ಎಂದು ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದರು. ಈ ವಿಷಯ ತಿಳಿದ ಅಪಹರಣಕಾರರು ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತದೋ ಎಂದು ಹೆದರಿ ಶರತ್‍ನನ್ನು ಅಪಹರಿಸಿದ್ದ ದಿನವೇ ಸ್ವಿಫ್ಟ್ ಕಾರಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದರು.  ನಂತರ ಶವಕ್ಕೆ ನರಸಿಂಹಯ್ಯನ ಕೆರೆಗೆ ಎಸೆದಿದ್ದರು. ಶವ ತೇಲುತ್ತಿದ್ದಾಗ ಹೊರತೆಗೆದು ತಾವರೆಕೆರೆ ವ್ಯಾಪ್ತಿಯ ಕುರುಬರಪಾಳ್ಯ ಬಂಡೆ ಬಳಿ ಗುಂಡಿ ತೋಡಿ ಹೂತು ಹಾಕಿ ಕೊಲೆಗೂ, ನಮಗೂ ಸಂಬಂಧವೇ ಇಲ್ಲ ಎಂಬಂತೆ ಓಡಾಡಿಕೊಂಡಿದ್ದರು.

ಸುಳಿವು ಸಿಕ್ಕಿದ್ದು ಹೇಗೆ:

ವಿಶಾಲ್ ಹಾಗೂ ಆತನ ಸ್ನೇಹಿತರ ಮೇಲೆ ಪೊಲೀಸರಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಆದರೂ ಅಪಹರಣ ಕೃತ್ಯವನ್ನು ಭೇದಿಸಲು ರಚಿಸಲಾಗಿದ್ದ ನಾಲ್ಕು ವಿಶೇಷ ಪೊಲೀಸ್ ತಂಡಗಳು ನಾನಾ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದರು. ಜ್ಞಾನಭಾರತಿ ಸುತ್ತಮುತ್ತ ಹೆಚ್ಚಿರುವ ಸರಗಳ್ಳರು ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ಪೊಲೀಸರಲ್ಲಿ ಬಲವಾಗಿತ್ತು. ಆದರೆ ವಿಚಾರಣೆ ಸಂದರ್ಭದಲ್ಲಿ ವಿಶಾಲ್ ನೀಡಿದ ಒಂದೇ ಒಂದು ಹೇಳಿಕೆ ಇಡೀ ತನಿಖೆ ದಿಕ್ಕನ್ನೇ ಬದಲಿಸಿತು.
ಶರತ್ ಬಳಿ ಕಂತೆ-ಕಂತೆ ಹಣ ಇತ್ತು. ಅವನು ಹೊಸ ಬೈಕ್‍ನಲ್ಲಿ ಲಡಾಕ್‍ಗೆ ಹೋಗಿರಬಹುದು ಎಂದು ವಿಶಾಲ್ ನೀಡಿದ ಹೇಳಿಕೆ ಪೊಲೀಸರಿಗೆ ಆತನ ಮೇಲೆ ಅನುಮಾನ ಉಂಟು ಮಾಡಿತು.

ತಕ್ಷಣ ಆತನನ್ನು ವಶಕ್ಕೆ ಪಡೆದು ಪೊಲೀಸ್ ತೀವ್ರ ವಿಚಾರಣೆಗೊಳಪಡಿಸಿದಾಗ ಶರತ್‍ನನ್ನು ಹಣದಾಸೆಗಾಗಿ ತನ್ನ ಸ್ನೇಹಿತರೊಂದಿಗೆ ಸೇರಿ ಅಪಹರಿಸಿದ್ದೆವು. ಎಲ್ಲಿ ನಮ್ಮ ಸಂಚು ಬಯಲಾಗುವುದೋ ಎಂದು ಹೆದರಿ ಆತನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ವಿಶಾಲ್ ನೀಡಿದ ಮಾಹಿತಿ ಮೇರೆಗೆ ಶರತ್ ಕೊಲೆಯಲ್ಲಿ ಭಾಗಿಯಾಗಿದ್ದ ಆತನ ಸ್ನೇಹಿತರ ಪೈಕಿ ಮೂವರನ್ನು ಬಂಧಿಸಿದ್ದು, ಪರಾರಿಯಾಗಿರುವ ಮತ್ತೊಬ್ಬನಿಗಾಗಿ ಶೋಧ ಮುಂದುವರೆಸಿದ್ದಾರೆ.

ಅಪಹರಣ ಯಾವಾಗ:

ಐಟಿ ಅಧಿಕಾರಿ ನಿರಂಜನ್‍ಕುಮಾರ್ ಅವರ ಪುತ್ರ ಇತ್ತೀಚೆಗಷ್ಟೆ ಹೊಸ ಬುಲೆಟ್ ಬೈಕ್ ಖರೀದಿಸಿದ್ದ. ಬುಲೆಟ್ ಖರೀದಿ ಮಾಡಿದ ಮರುದಿನವೇ ಅಂದರೆ ಕಳೆದ 12 ರಂದು ನಿಗೂಢವಾಗಿ ನಾಪತ್ತೆಯಾಗಿದ್ದ. ನಾಪತ್ತೆಯಾದ ನಂತರ ತಮ್ಮ ಮನೆಯವರಿಗೆ 50ಲಕ್ಷ ಒತ್ತೆ ಹಣ ನೀಡದಿದ್ದರೆ ನನ್ನನ್ನು ಕೊಲೆ ಮಾಡುತ್ತಾರೆ. ಅಪಹರಣಕಾರರಿಂದ ನನ್ನ ಅಕ್ಕನ ಪ್ರಾಣಕ್ಕೂ ಅಪಾಯವಿದೆ. ಅವರು ಕೇಳಿದ ಹಣ ನೀಡಿ, ಪೊಲೀಸರಿಗೆ ಮಾತ್ರ ಮಾಹಿತಿ ನೀಡಬೇಡಿ. ನಾಳೆ ಅಪಹರಣಕಾರರು ನಿಮಗೆ ದೂರವಾಣಿ ಕರೆ ಮಾಡುತ್ತಾರೆ ಎಂದು ವಾಟ್ಸಪ್ ವಿಡಿಯೋ ಕಳುಹಿಸಿದ್ದ.

ಆದರೆ ಶರತ್ ವಿಡಿಯೋ ಬಂದ ನಂತರ ಅಪಹರಣಕಾರರಿಂದಾಗಲೀ ಅಥವಾ ಶರತ್‍ನಿಂದಾಗಲೀ ಯಾವುದೇ ಕರೆ ಬಂದಿರಲಿಲ್ಲ. ಹೀಗಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜ್ಞಾನಭಾರತಿ ಪೊಲೀಸರಿಗೆ ಅಪಹರಣಕಾರರ ಬಗ್ಗೆ ಕಿಂಚಿತ್ತೂ ಪುರಾವೆ ದೊರೆಕಿರಲಿಲ್ಲ.
ಆದರೆ ಶರತ್ ಹೊಸ ಬುಲೆಟ್ ಖರೀದಿಸಿದ ನಂತರ ಜಮ್ಮು-ಕಾಶ್ಮೀರ ಲಡಾಕ್ ಪ್ರವಾಸ ಕುರಿತಂತೆ ಗೂಗಲ್‍ನಲ್ಲಿ ಸರ್ಚ್ ಮಾಡಿದ್ದ. ಮಾತ್ರವಲ್ಲ, ಕಾಶ್ಮೀರಕ್ಕೆ ತೆರಳುವ ರೂಟ್ ಮ್ಯಾಪ್‍ನ್ನು ಸಂಗ್ರಹಿಸಿದ್ದ. ಹೀಗಾಗಿ ಶರತ್ ಹುಡುಕಾಟಕ್ಕೆ ಜಮ್ಮು-ಕಾಶ್ಮೀರಕ್ಕೂ ಪೊಲೀಸರ ಒಂದು ತಂಡ ತೆರಳಿತ್ತು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ನಿಗೂಢವಾಗಿದ್ದ ಶರತ್ ಅಪಹರಣ, ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಕೆಂಗೇರಿ ಗೇಟ್ ಉಪವಿಭಾಗದ ಪೊಲೀಸರು ಹಾಗೂ ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್, ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮಾಲಿನಿ ಕೃಷ್ಣಮೂರ್ತಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಬೈಕ್‍ಗಳ ವ್ಯಾಮೋಹ ಅರಿತು ಶರತ್‍ನನ್ನು ಕರೆಸಿಕೊಂಡಿದ್ದ ಆರೋಪಿ ; 

ಬೆಂಗಳೂರು, ಸೆ.22-ಆದಾಯ ತೆರಿಗೆ ಅಧಿಕಾರಿ ಮಗನಾದ ಶರತ್‍ನಿಗೆ ದುಬಾರಿ ಬೆಲೆಯ ಹಾಗೂ ವಿದೇಶಿ ಬೈಕ್‍ಗಳ ಬಗ್ಗೆ ಅತೀವ ವ್ಯಾಮೋಹವಿದ್ದುದನ್ನು ಅರಿತಿದ್ದ ಆರೋಪಿ ವಿಶಾಲ್ ಉಪಾಯ ಮಾಡಿ ಕರೆಸಿಕೊಂಡಿದ್ದನು. ನನ್ನ ಸ್ನೇಹಿತನ ಬಳಿ ಬೆನಾಲಿ ಬೈಕ್ ಇದ್ದು, ಅದನ್ನು ರೈಡ್ ಮಾಡಲು 12 ರಂದು ಸಂಜೆ ಹೋಗುವುದಾಗಿ ಶರತ್‍ಗೆ ತಿಳಿಸಿದ್ದನು. ಈತನ ಮಾತನ್ನು ನಂಬಿದ ಶರತ್ ನಾನೂ ಹೊಸದಾಗಿ ಕೊಂಡಿರುವ ರಾಯಲ್ ಎನ್‍ಫೀಲ್ಡ್ ಬೈಕ್‍ನಲ್ಲಿ ಬರುವುದಾಗಿ ತಿಳಿಸಿ ಕೆಂಗೇರಿ ಸ್ಯಾಟ್‍ಲೈಟ್‍ನ ಶಿರ್ಕೆ ಅಪಾರ್ಟ್‍ಮೆಂಟ್ ಬಳಿ ಹೋಗಿದ್ದಾನೆ.

ಈ ಸಂದರ್ಭದಲ್ಲಿ ಆರೋಪಿ ವಿಶಾಲ್ ಮತ್ತು ಸ್ನೇಹಿತರು ರೂಪಿಸಿದ್ದ ಸಂಚಿನಂತೆ ವಿನಯ್‍ಪ್ರಸಾದ್ ತಂದಿದ್ದ ಸ್ವಿಫ್ಟ್‍ಕಾರಿನಲ್ಲಿ ಶರತ್‍ನನ್ನು ಅಪಹರಿಸಿಕೊಂಡು ಹೋಗಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದನು.

Facebook Comments

Sri Raghav

Admin