ಹನಿಟ್ರ್ಯಾಪ್, ಚಿಟ್ ಫಂಡ್ ವಂಚಕರ ಹೆಡೆಮುರಿ ಕಟ್ಟಲು ಮುಂದಾದ ಪೊಲೀಸ್ ಇಲಾಖೆ

Police-010

ಬೆಂಗಳೂರು, ಅ.5- ಹನಿಟ್ರ್ಯಾಪ್, ಮೆಡಿಕಲ್ ಸೀಟ್, ಚಿಟ್ ಫಂಡ್ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿರುವ ದಂಧೆಕೋರರ ಹೆಡೆಮುರಿ ಕಟ್ಟಲು ನಗರ ಪೊಲೀಸ್ ಇಲಾಖೆಯಲ್ಲಿ ವಿಶೇಷ ದಳ ಸಿದ್ಧವಾಗಿದೆ. ವೈದ್ಯಕೀಯ, ಶಿಕ್ಷಣ, ಉದ್ಯಮ, ವಾಸಂಗ, ಉದ್ಯೋಗಕ್ಕಾಗಿ ಜಗತ್ತಿನ ವಿವಿಧ ದೇಶದ ಜನ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಇವರ ನಡುವೆ ವಂಚಕರೂ ಸೇರಿಕೊಂಡು ಅಮಾಯಕರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಹನಿಟ್ರ್ಯಾಪ್, ರಿಯಲ್ ಎಸ್ಟೇಟ್ ವಂಚನೆ, ವೈದ್ಯಕೀಯ ಸೀಟು, ನಕಲಿ ಕ್ರೆಡಿಟ್, ಡೆಬಿಟ್ ಕಾರ್ಡ್, ಸೈಬರ್ ಕ್ರೈಂ, ವಿದೇಶಿ ದೇಣಿಗೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ನಡೆಯುತ್ತಿದೆ. ಸಣ್ಣ ಉದ್ಯಮಿಗಳು, ವಿದ್ಯಾರ್ಥಿಗಳು, ಅಮಾಯಕರು, ವೃದ್ಧರು, ಬಡವರು ವಂಚನೆ ಗೊಳಗಾಗುತ್ತಿದ್ದಾರೆ.

ಇತ್ತೀಚೆಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂತಹ ವಂಚಕರಿಗೆ ಕಡಿವಾಣ ಹಾಕಲು ಗಂಭೀರವಾಗಿ ಚರ್ಚೆ ನಡೆಸಲಾಗಿತ್ತು. ಹೀಗಾಗಿ, ವಂಚಕರನ್ನು ಮಟ್ಟ ಹಾಕಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ತಂಡ ರಚಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಎಸಿಪಿಗಳ ನೇತೃತ್ವದಲ್ಲಿ 10 ತಂಡ: ವಂಚನೆ ಜಾಲಗಳ ಮತ್ತು ವಂಚಕರ ಮೇಲೆ ನಿಗಾವಹಿಸಿ, ಆರೋಪಿಗಳನ್ನು ಪತ್ತೆ ಹಚ್ಚಲು ಎಸಿಪಿಗಳ ನೇತೃತ್ವದಲ್ಲಿ 10 ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಇನ್ಸ್ಪೆಕ್ಟರ್, ಎಸ್ಐ ಮತ್ತು ಸಿಬ್ಬಂದಿಯನ್ನು ಒಳಗೊಂಡಿದೆ. ವಂಚನೆ ಆರೋಪಿಗಳನ್ನು ಬಂಧಿಸುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿ ವಹಿಸಲಾಗಿದೆ.

ಕಿರುಹೊತ್ತಿಗೆ:

ನಗರದ ವಿವಿದ ಠಾಣೆಗಳಲ್ಲಿ ದಾಖಲಾಗಿರುವ ವಂಚನೆ ಪ್ರಕರಣಗಳು ಮತ್ತು ಆರೋಪಿಗಳ ವಿವರ ಸಂಗ್ರಹಿಸಲಾಗಿದೆ. ಆರೋಪಿಗಳ ಫೋಟೋ, ಹೆಸರು, ವಿಳಾಸ ಮತ್ತು ವಂಚನೆ ಮಾದರಿ ಮಾಹಿತಿ ಒಳಗೊಂಡ ಕಿರುಹೊತ್ತಿಗೆ ಸಿದ್ಧಪಡಿಸಲಾಗುತ್ತಿದೆ. ಈ ಪುಸ್ತಕವನ್ನು ಸಂಘ-ಸಂಸ್ಥೆ, ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಜನರಿಗೆ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪಟ್ಟಿ:

ಹನಿಟ್ರ್ಯಾಪ್, ರಿಯಲ್ ಎಸ್ಟೇಟ್, ವಿದೇಶಿ ದೇಣಿಗೆ, 2 ತಲೆ ಹಾವು, ನಕಲಿ ವೈದ್ಯ, ಪೊಲೀಸರ ಸೋಗಿನಲ್ಲಿ ದಾಳಿ, ಮೆಡಿಕಲ್ ಸೀಟ್, ನೈಜೀರಿಯನ್ ವಂಚನೆ, ಆನ್ಲೈನ್ ವಂಚನೆ, ಸಾಲ ಕೊಡಿಸುವ ನೆಪ, ಚಿಟ್ ಫಂಡ್, ಕಪ್ಪು ಹಣ, ಆಭರಣ ಪಾಲಿಷ್, ಲಾಟರಿ ಸೇರಿದಂತೆ 25 ಮಾದರಿಯ ವಂಚನೆಗಳನ್ನು ಪಟ್ಟಿ ಮಾಡಲಾಗಿದೆ. ಯಾವ ವಂಚನೆಯಲ್ಲಿ ಯಾರು ತೊಡಗಿದ್ದಾರೆ. ಯಾವ ರೀತಿ ವಂಚಿಸುತ್ತಿದ್ದಾರೆ ಹಾಗೂ ಜನ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಅಧ್ಯಯನ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.
ನಕಲಿ ಅಧಿಕಾರಿಗಳ ಮೇಲೆ ನಿಗಾ: ಪೊಲೀಸ್, ಸಿಬಿಐ, ತೆರಿಗೆ ಅಧಿಕಾರಿ, ಸಿಸಿಬಿ ಮತ್ತು ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ನಕಲಿ ಅಧಿಕಾರಿಗಳು ಶ್ರೀಮಂತರ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿ ಸುಲಿಗೆ ಮಾಡುತ್ತಿದ್ದಾರೆ. ಇಂಥವರನ್ನು ಪತ್ತೆ ಮಾಡಿ ಜೈಲಿಗೆ ಕಳುಹಿಸುವುದರ ಜತೆಗೆ ಕೋರ್ಟ್ನಲ್ಲಿ ಶಿಕ್ಷೆಯಾಗುವಂತೆ ಎಚ್ಚರಿಕೆ ವಹಿಸಲಾಗುತ್ತದೆ.

ಖಾಕಿಗಳ ಕಳ್ಳಾಟಕ್ಕೂ ಬ್ರೇಕ್:

ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ರಿಯಲ್ ಎಸ್ಟೇಟ್ ಮತ್ತು ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಹೈಗ್ರೌಂಡ್ಸ್, ಸಂಜಯನಗರ ಹಾಗೂ ಪೀಣ್ಯಾ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಹನಿಟ್ರ್ಯಾಪ್ ಮತ್ತಿತರ ಪ್ರಕರಣಗಳಲ್ಲಿ ಪೊಲೀಸರು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಇದು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು, ಖಾಕಿ ತೊಟ್ಟಿರುವ ವಸೂಲಿಕೋರರ ಮೇಲೂ ನಿಗಾ ವಹಿಸಲಾಗುತ್ತದೆ.  ಬೆಂಗಳೂರಿನಲ್ಲಿ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಿದ್ದು, ವಂಚಕರ ಫೋಟೋ, ಹೆಸರು, ವಿಳಾಸ ಒಳಗೊಂಡ ಕಿರುಹೊತ್ತಿಗೆ ಸಿದ್ಧಪಡಿಸಿ ಜನರಿಗೆ ವಿತರಿಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin