ಹರಾಜಿಗಿದೆ ‘ಮುಕುಂದ ಮುರಾರಿ’ಯ ಬೈಕ್

Mukunda-Murari--02

ಸ್ಯಾಂಡಲ್‍ವುಡ್‍ನ ಇಬ್ಬರು ಸೂಪರ್‍ಸ್ಟಾರ್‍ಗಳು ಒಟ್ಟಾಗಿ ತೆರೆಮೇಲೆ ಕಾಣಿಸಿಕೊಂಡಿರುವ ಚಿತ್ರ ಮುಕುಂದ ಮುರಾರಿ ಕಳೆದ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಲಿದೆ. ಈ ಚಿತ್ರದ ಮೂಲಕ ಜಯಶ್ರೀದೇವಿ ಅವರು 7 ವರ್ಷಗಳ ಅಜ್ಞಾತವಾಸದ ನಂತರ ಪುನ: ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ರನ್ನ, ಅಧ್ಯಕ್ಷ, ವಿಕ್ಟರಿಯಂಥ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ನಂದಕಿಶೋರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ನಿರ್ಮಾಪಕರು ಪ್ರೇಕ್ಷಕರಿಗೆ ಇದೀಗ ಮತ್ತೊಂದು ಬಂಪರ್ ಆಫರ್ ನೀಡಿದ್ದಾರೆ. ಅದೇನೆಂದರೆ ಬೆಂಗಳೂರಿನ ಮೇನಕ ಚಿತ್ರಮಂದಿರದ ಮುಂದೆ ಇದೀಗ ಒಂದು ಹೊಸ ಬೈಕ್ ಪ್ರತ್ಯಕ್ಷವಾಗಿದೆ. ಆ ಬೈಕ್ ಬೇರಾವುದೂ ಅಲ್ಲ, ಮುಕುಂದ ಮುರಾರಿ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರು ಉಪಯೋಗಿಸಿದಂಥ ಬೈಕದು. ಚಿತ್ರಕ್ಕಾಗಿಯೇ ಆ ಬೈಕನ್ನು ವಿಶೇಷವಾಗಿ ನವೀಕರಿಸಲಾಗಿತ್ತು.

ಅದೆಲ್ಲ ಇರಲಿ, ವಿಷಯ ಏನಪ್ಪಾ ಅಂದ್ರೆ ಈ ಬೈಕನ್ನು ಯಾರು ಬೇಕಾದರೂ ಪಡೆದುಕೊಂಡು ಓಡಿಸಬಹುದು. ಆದರೆ ಅದಕ್ಕೊಂದು ಷರತ್ತಿದೆ. ಈ ಬೈಕನ್ನು ಸುಮ್ಮನೇ ಕೊಡುವುದಿಲ್ಲ, ಇದನ್ನು ಸಾರ್ವಜನಿಕವಾಗಿ ಹರಾಜಿಗಿಡಲಾಗಿದ್ದು ಇಷ್ಟಪಟ್ಟವರು ಹರಾಜಿನಲ್ಲಿ ಕೊಂಡುಕೊಳ್ಳಬಹುದಾಗಿದೆ. ಅಲ್ಲದೆ ಹರಾಜಿನಲ್ಲಿ ಬಂದ ಈ ಬೈಕಿನ ಹಣವನ್ನು ತುಮಕೂರಿನ ಸಿದ್ದಗಂಗಾ ಮಠಕ್ಕೆ ದೇಣಿಗೆಯಾಗಿ ನೀಡುವ ಉದ್ದೇಶ ಚಿತ್ರತಂಡಕ್ಕಿದೆ. ನವೆಂಬರ್ 11ರಂದು ಈ ಬೈಕಿನ ಹರಾಜು ನಡೆಯಲಿದ್ದು ಅದೃಷ್ಟಶಾಲಿಗಳು ಈ ಬೈಕಿನ ಒಡೆಯರಾಗಲಿದ್ದಾರೆ, ಅಲ್ಲದೆ ಅವರು ನೀಡುವ ಹಣ ಕೂಡ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಈ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡರೆ, ಆ ಭಗವಂತನಿಗೇ ಸವಾಲ್ ಹಾಕುವ ಮಾನವನಾಗಿ ನಟ ಉಪೇಂದ್ರ ಅಭಿನಯಿಸಿದ್ದಾರೆ.

ಹಿಂದಿಯಲ್ಲಿ ಓ ಮೈ ಗಾಡ್ ಹಾಗೂ ತೆಲುಗು ಭಾಷೆಯಲ್ಲಿ ಗೋವಿಂದ ಗೋಪಾಲ ಆಗಿ ತೆರೆಕಂಡಿದ್ದ ಈ ಚಿತ್ರವನ್ನು ಕನ್ನಡದಲ್ಲಿ ನಂದಕಿಶೋರ್ ಅವರು ನಿರ್ದೇಶಿಸಿದ್ದರು. ಎಂ.ಎನ್.ಕೆ. ಮೂವೀಸ್ ಮೂಲಕ ಎಂ.ಎನ್.ಕುಮಾರ್ ಹಾಗೂ ಜಯಶ್ರೀದೇವಿ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

► Follow us on –  Facebook / Twitter  / Google+

Sri Raghav

Admin