ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ‘ಕಾಗೆ’ ಬಳಗ ಮಹಾರಾಷ್ಟ್ರದಲ್ಲಿ ಅರೆಸ್ಟ್

Raju-Kage-Vivek-Shetty

ಬೆಳಗಾವಿ, ಜ.19 – ಕಾಂಗ್ರೆಸ್ ಕಾರ್ಯಕರ್ತ ವಿವೇಕ್‍ಶೆಟ್ಟಿ ಮನೆಗೆ ನುಗ್ಗಿ  ಮಾರಣಾಂತಿಕ ಹಲ್ಲೆ ನಡೆಸಿದ್ದ ಕಾಗವಾಡ ಬಿಜೆಪಿ ಶಾಸಕ ರಾಜು ಕಾಗೆ ಹಾಗೂ ಕುಟುಂಬದ ಆರು ಜನರನ್ನು  ಪೊಲೀಸರು ಬಂಧಿಸಿದ್ದಾರೆ. ಪೂನಾದಿಂದ 120 ಕಿಲೋ ಮೀಟರ್ ದೂರದಲ್ಲಿರುವ ಜಂಗಲ್‍ಗಾ ರೆಸಾರ್ಟ್‍ನಲ್ಲಿ ತಲೆಮರೆಸಿಕೊಂಡಿದ್ದ ಶಾಸಕ ರಾಜು ಕಾಗೆ ಹಾಗೂ ಇವರ ಪುತ್ರಿ, ಸೋದರ ಸೇರಿದಂತೆ ಆರು ಮಂದಿಯನ್ನು ಬಂಧಿಸಿರುವುದಾಗಿ ಎಸ್ಪಿ ರವಿಕಾಂತೇಗೌಡ ತಿಳಿಸಿದ್ದಾರೆ. ಕಾಗೆ ಸಹೋದರ ಮತ್ತು ಪ್ರಕರಣದ ಮೊದಲ ಆರೋಪಿ ಸಿದ್ದಗೌಡ ಕಾಗೆ, ಪುತ್ರಿ ತೃಪ್ತಿ ಕಾಗೆ, ಪತ್ನಿ ಶೋಭಾ, ಡ್ರೈವರ್ ಬಾಹುಬಲಿ ಮತ್ತು ಅಶೋಕ್ ಕಾಗೆಯನ್ನು ಅಥಣಿ ಮತ್ತು ಹುಕ್ಕೇರಿ ಸಿಪಿಐ ನೇತೃತ್ವದ ತಂಡ  ಇಂದು  ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಪ್ರಕರಣ ಸಂಬಂಧ ಇನ್ನೂ 7 ಮಂದಿ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ವೇಳೆ ಶಾಸಕ ರಾಜು ಕಾಗೆ, ನಾನು ಶಾಸಕ. ನನ್ನನ್ನು ನೀವು ವಶಕ್ಕೆ ಪಡೆಯುವಂತಿಲ್ಲ ಎಂದು ತಗಾದೆ ತೆಗೆದಿದ್ದಾರೆ. ಈ ವೇಳೆ ಪೊಲೀಸರು ಎಫ್‍ಐಆರ್ ಪ್ರತಿ ತೋರಿಸಿ ವಶಕ್ಕೆ ಪಡೆದಿದ್ದಾರೆ. ಇತ್ತ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರ ಸ್ವಗ್ರಾಮ ಉಗಾರ್‍ಖುರ್ದಾದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

 

ದೂರುದಾರ ವಿವೇಕ್‍ಶೆಟ್ಟಿ ಮನೆಗೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಹಲ್ಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕಾಗೆ ಕುಟುಂಬದ 13 ಮಂದಿ ಮೇಲೆ ಪೊಲೀಸರು ಗೂಂಡಾಗಿರಿ ಕೇಸು ದಾಖಲಿಸಿದ್ದರು. ಶಾಸಕರ ಸಹೋದರ ಪ್ರಸಾದ್ ಸಿದ್ದೇಗೌಡ ಕಾಗೆ ಮೊದಲ ಆರೋಪಿಯಾಗಿದ್ದರೆ, ರಾಜು ಕಾಗೆ 12ನೆ ಆರೋಪಿಯಾಗಿದ್ದಾರೆ. ಇವರೆಲ್ಲರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 342, 452, 307, 302, 323, 324, 326, 354 ಹಾಗೂ 367, 504, 506, 149 ಸೆಕ್ಷನ್ ಅಡಿ ಎಫ್‍ಐಆರ್ ದಾಖಲಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಫೇಸ್‍ಬುಕ್‍ನಲ್ಲಿ ಕಾಂಗ್ರೆಸ್ ಮುಖಂಡ ವಿವೇಕ್‍ಶೆಟ್ಟಿ ಬಿಜೆಪಿ ವಿರುದ್ಧ ಟೀಕಾತ್ಮಕ ಸ್ಟೇಟಸ್ ಹಾಕಿದ್ದರು. ಇದನ್ನೇ  ನೆಪ  ಮಾಡಿಕೊಂಡು ಶಾಸಕ ರಾಜು ಕಾಗೆ ಸಹೋದರ ಪ್ರಸಾದ್ ಸಿದ್ದಗೌಡ ಕಾಗೆ ಹಾಗೂ 12 ಮಂದಿ   ಜ.1 ರಂದು ಬೆಳಿಗ್ಗೆ  8 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ  ವಿವೇಕ್‍ಶೆಟ್ಟಿ ಮನೆಗೆ ನುಗ್ಗಿ  ಹಲ್ಲೆ ವಿವೇಕ್ ಶೆಟ್ಟಿಯನ್ನು ಮನೆಯ ಮೆಟ್ಟಿಲಿನ ಮೇಲೆ ಧರಧರನೆ ಎಳೆದು ಹಲ್ಲೆ ನಡೆಸಿದ್ದರು.  ಈ ಎಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ವಿವೇಕ್‍ಶೆಟ್ಟಿ ದೂರಿನ ಮೇರೆಗೆ ರಾಜು  ಕಾಗೆ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ಗೂಂಡಾಗಿರಿ ಪ್ರಕರಣ ದಾಖಲಿಸಿದ್ದರು.

ವಿವೇಕ್‍ಶೆಟ್ಟಿ ಪ್ರತಿಕ್ರಿಯೆ:

ಹಲ್ಲೆಗೊಳಗಾಗಿ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕ್‍ಶೆಟ್ಟಿ ಆರೋಪಿಗಳ ಬಂಧನ ಸಂಬಂಧ ಪ್ರತಿಕ್ರಿಯೆ ನೀಡಿ ಈಗ ನನಗೆ ನೆಮ್ಮದಿ ತಂದಿದೆ. ಜೀವ ಭಯ ಹೊರಟುಹೋಗಿದೆ. ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ. ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಸಾಕ್ಷ್ಯ ಲಭ್ಯ:

ಘಟನೆ ನಡೆದ ದಿನದಂದು ಶಾಸಕ ರಾಜು ಕಾಗೆ ಅವರು ಉಗಾರಖುರ್ದಾದಲ್ಲೇ ಇದ್ದರೂ ಎಂಬುದಕ್ಕೆ ಸಾಕ್ಷ್ಯ ಲಭ್ಯವಾಗಿದೆ ಎಂದು ಎಸ್ಪಿ ರವಿಕಾಂತೇಗೌಡ ತಿಳಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಉದ್ಯಮಿ ವಿವೇಕ್‍ಶೆಟ್ಟಿ ಅವರ ಮೇಲೆ ಜ.1 ರಂದು ಬೆಳಗ್ಗೆ  8.30ರ ಸುಮಾರಿನಲ್ಲಿ ಹಲ್ಲೆ ನಡೆದಿದ್ದು, ಆತನ ಮನೆ ಪಕ್ಕದಲ್ಲೇ ಇರುವ ಲಕ್ಷ್ಮಿದೇವಸ್ಥಾನಕ್ಕೆ ಶಾಸಕ ರಾಜು ಕಾಗೆ ಅವರು 8.33ರ ವೇಳೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ದೇವಸ್ಥಾನದಲ್ಲಿನ ಸಿಸಿ ಟಿವಿಯ ದೃಶ್ಯಾವಳಿಗಳು ಲಭ್ಯವಾಗಿದೆ ಎಂದು ಹೇಳಿದ್ದಾರೆ.

ಆದರೆ ಶಾಸಕರು ಘಟನೆ ನಡೆದ ದಿನ ತಾವು ಊರಿನಲ್ಲೇ ಇಲ್ಲ ಎಂದು ಹೇಳಿದ್ದರು. ಗ್ರಾಮದಲ್ಲೇ ಇದ್ದ ಬಗ್ಗೆ ಸಾಕ್ಷ್ಯ ಸಿಕ್ಕಿದೆ ಎಂದಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 10 ಜನರನ್ನು ಬಂಧಿಸಿದ್ದು, ಇನ್ನೂ 7 ಜನ ತಲೆಮರೆಸಿಕೊಂಡಿದ್ದಾರೆ ಉಳಿದವರಿಗಾಗಿ ಶೋಧ ಮುಂದುವರೆದಿದೆ ಎಂದು ಹೇಳಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಅಥಣಿ, ಹುಕ್ಕೇರಿಯ ಸಿಪಿಐಗಳ ನೇತೃತ್ವದ  ತಂಡ ಶಾಸಕ ಸೇರಿದಂತೆ 6 ಜನರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin