ಹಳೆ ನೋಟುಗಳ ಜಮೆಗೆ ಹೇರಿದ್ದ 5000 ರೂ. ಮಿತಿ ವಾಪಸ್ ಪಡೆದ ಆರ್ಬಿಐ
ನವದೆಹಲಿ, ಡಿ.21- ನೋಟು ನಿಷೇಧದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದಿನಕ್ಕೊಂದು ಹೊಸ ಕಾನೂನು ಜಾರಿಗೆ ತರುತ್ತಿದ್ದು, ಜನತೆಯಲ್ಲಿ ತೀವ್ರ ಗೊಂದಲ ಸೃಷ್ಟಿಸುತ್ತಿದೆ. ಮೊನ್ನೆಯಷ್ಟೆ ಬ್ಯಾಂಕ್ಗೆ ಪಾವತಿಸುವ ನಗದಿನ ಮೇಲೆ ಮಿತಿ ಹೇರಿದ್ದ ಆರ್ಬಿಐ ಇದೀಗ ಅದನ್ನು ಹಿಂಪಡೆದು ಯಾರು ಎಷ್ಟು ಮೊತ್ತದ ಹಣ ಬೇಕಾದರೂ ಬ್ಯಾಂಕ್ಗೆ ಜಮೆ ಮಾಡಬಹುದು ಎಂದು ಹೇಳಿದೆ. ಒಟ್ಟಾರೆ ಆರ್ಬಿಐನ ಈ ಆದೇಶದಿಂದಾಗಿ ಜನತೆಗೆ ಸ್ವಲ್ಪ ಮಟ್ಟಿಗೆ ನಿರಾಳವಾದಂತಾಗಿದೆ. ಸೋಮವಾರ ಇದ್ದಕ್ಕಿದ್ದಂತೆ ಡಿ.31ರೊಳಗೆ ಬ್ಯಾಂಕ್ಗಳಿಗೆ ಜಮೆ ಮಾಡುವ ಹಣದ ಮೊತ್ತ ದಿನಕ್ಕೆ 5 ಸಾವಿರ ಮೀರಿರಬಾರದು ಎಂದು ಆರ್ಬಿಐ ಹೇಳಿತ್ತು. ಅಂದರೆ ಮಿತಿಗಿಂತ ಹೆಚ್ಚು ಹಣ ವಿವಿಧ ಬ್ಯಾಂಕ್ಗಳಿಗೆ ಪಾವತಿಸುವ ಗ್ರಾಹಕರು ಒಂದೇ ಬಾರಿ ಜಮೆ ಮಾಡಬೇಕು ಎಂದು ಹೇಳಿತ್ತು.
ನ.8ರಂದು ಮಧ್ಯರಾತ್ರಿ 500 ಮತ್ತು 1000ರೂ. ಮುಖಬೆಲೆ ನೋಟುಗಳನ್ನು ದಿಢೀರನೆ ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲಿಂದೀಚೆಗೆ ದಿನಕ್ಕೊಂದು ಕಾನೂನುಗಳು ಮೇಲಿಂದ ಮೇಲೆ ಬರಲಾರಂಭಿಸಿದವು. ಒಂದು ಲೆಕ್ಕದ ಪ್ರಕಾರ ಕಳೆದ ನ.8 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಮತ್ತು ಆರ್ಬಿಐ ಸಂಸ್ಥೆಗಳು ಸುಮಾರು 40 ಬಾರಿ ತಮ್ಮ ಆದೇಶಗಳನ್ನು ಬದಲಾಯಿಸಿರುವುದು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ.