ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ರದ್ದು

Spread the love

Rohini--02
ಬೆಂಗಳೂರು,ಮಾ.27-ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ರದ್ದುಪಡಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದ್ದು , ಸಿಂಧೂರಿ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಹಾಸನ ಜಿಲ್ಲಾಧಿಕಾರಿ ಸ್ಥಾನದಿಂದ ಸಿಂಧೂರಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಸಿಎಟಿ ಮೊರೆ ಹೋಗಿದ್ದರು.

ಹಾಸನ ಜಿಲ್ಲಾಧಿಕಾರಿಯಾಗಿ ಒಂದೆರಡು ತಿಂಗಳಷ್ಟೆ ಕಳೆದಿತ್ತು. ಚುನಾವಣೆ ಸಂದರ್ಭದಲ್ಲಿ ಬೇಕೆಂದೆ ಸರ್ಕಾರ ತಮ್ಮನ್ನು ಬೇರೆಡೆಗೆ ವರ್ಗಾವಣೆ ಮಾಡಿದೆ. ನಾನು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದನ್ನು ಬಯಲಿಗೆಳೆದಿದ್ದೆ.ಸ್ಥಳೀಯ ರಾಜಕಾರಣಿಗಳು ಮುಖ್ಯಮಂತ್ರಿಗಳ ಮೂಲಕ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿದ್ದರು ಎಂದು ಸಿಂಧೂರಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಿಎಟಿಯಿಂದಲೂ ತಮಗೆ ಸರಿಯಾದ ನ್ಯಾಯ ಸಿಗದಿದ್ದಕ್ಕೆ ಅವರು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಿಎಟಿ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮತ್ತೆ ವಿಚಾರಣೆ ನಡೆಸಿ ಸೂಕ್ತ ಆದೇಶ ನೀಡುವಂತೆ ಸಿಎಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಏ.2ರಂದು ಸಿಎಟಿ ವಿಚಾರಣೆಗೆ ನಿಗದಿಪಡಿಸಿರುವ ನ್ಯಾಯಾಧೀಶರು ಮುಂದಿನ ಆದೇಶ ಬರುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದಾರೆ. ಜೊತೆ ಸಿಂಧೂರಿ ಅವರ ವರ್ಗಾವಣೆಯನ್ನು ರದ್ದುಪಡಿಸಿರುವುದರಿಂದ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.

Sri Raghav

Admin