ಹುಷಾರ್..ಕಂಡಕಂಡಲ್ಲಿ ಕಾಲೆತ್ತಿದರೆ ಕಾಡಲಿದ್ದಾನೆ ಶನಿದೇವ…!

Urin--02

ಬೆಂಗಳೂರು, ಡಿ.6- ಕಂಡ ಕಂಡಲ್ಲಿ ಮೂತ್ರವಿಸರ್ಜನೆ ಮಾಡುವುದು, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಗಟ್ಟಲು ಬೀದಿಗಿಳಿದಿದ್ದಾನೆ ಶನಿದೇವ.
ಅರೆ… ಇದೇನು ಶನಿದೇವ ಎಂದು ಆಶ್ಚರ್ಯನಾ… ಹೌದು. ರಸ್ತೆ ಬದಿಯ ಕಾಂಪೌಂಡ್‍ಗಳಲ್ಲಿ ಮೂತ್ರವಿಸರ್ಜನೆ ಮತ್ತು ಕಸ ಎಸೆಯುವುದನ್ನು ತಡೆಗಟ್ಟಲು ಶನಿದೇವನ ನೆರವಿಗೆ ಮುಂದಾಗಿದ್ದಾರೆ ಕೆಲವರು. ನೀವು ಇಲ್ಲಿ ಮೂತ್ರವಿಸರ್ಜನೆ ಮಾಡಿದರೆ ನಿಮ್ಮ ನಿವಾಸ ನನ್ನ ವಾಸ ಎಂಬ ಶನಿದೇವನ ನಾಮಫಲಕಗಳು ರಸ್ತೆ ಬದಿಗಳಲ್ಲಿ ರಾರಾಜಿಸುತ್ತಿವೆ.

Urin--04

ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ ಮತ್ತಿತರ ಪ್ರದೇಶಗಳಲ್ಲಿ ಶನಿದೇವನ ಭಾವಚಿತ್ರಗಳನ್ನು ಮೂತ್ರವಿಸರ್ಜಿಸುವ ಮತ್ತು ಕಸ ಎಸೆಯುವ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಸ್ವಚ್ಛತೆ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಯಿ ಬಡಿದುಕೊಂಡರೂ ನಮ್ಮ ಜನ ಇನ್ನೂ ಬುದ್ದಿ ಕಲಿಯುತ್ತಿಲ್ಲ. ಅವರಿಗೆ ಬುದ್ದಿ ಕಲಿಸಬೇಕಾದರೆ ಶನಿ ದೇವನೇ ಬರಬೇಕು ಎಂಬ ಐಡಿಯ ಅದ್ಯಾವ ಮಹಾಶಯನಿಗೆ ಹೊಳೆಯಿತೋ ಗೊತ್ತಿಲ್ಲ.

Urin--03

ಮನುಷ್ಯ ಯಾರಿಗೂ ಹೆದರದಿದ್ದರೂ ಜೀವನ ಪರ್ಯಂತ ಕಾಡುವ ಶನಿ ದೇವರಿಗೆ ಮಾತ್ರ ಹೆದರುತ್ತಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಸ್ವಚ್ಛತೆ ಇಲ್ಲದ ಪ್ರದೇಶಗಳಲೆಲ್ಲಾ ಶನಿ ದೇವನ ಭಾವಚಿತ್ರಕ್ಕೆ ಹೆದರಿ ಯಾರೂ ಮೂತ್ರವಿಸರ್ಜನೆ ಮಾಡುವ ಗೋಜಿಗೆ ಹೋಗದಿರುವುದರಿಂದ ಎಲ್ಲೆಲ್ಲೂ ಸ್ವಚ್ಛತೆ ಕಂಡು ಬರುತ್ತಿದೆ.  ಅದ್ಯಾವ ಪುಣ್ಯಾತ್ಮನ ಐಡಿಯವೋ ಕಾಣೆ. ಮೋದಿಗಿಂತ ಶನಿದೇವರೇ ಬುದ್ದಿಗೇಡಿ ಜನಗಳ ಮೇಲೆ ಪ್ರಭಾವ ಬೀರುತ್ತಿರುವುದಂತೂ ಸತ್ಯ.

Urin--05

Sri Raghav

Admin