ಹುಸಿ ವದಂತಿಗೆ ಇಬ್ಬರು ಬಲಿ, ಮಹಿಳೆಯರಿಗೆ ಥಳಿತ, ಹಲವರ ಬಂಧನ

Rumers

ಕೋಲ್ಕತಾ, ಜ.25-ಮುಸುಕುಧಾರಿಗಳು ಮಕ್ಕಳ ಅಪಹರಣ, ಅತ್ಯಾಚಾರ ಮತ್ತು ದರೋಡೆಯಂಥ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬ ಸುಳ್ಳು ವದಂತಿಗಳನ್ನು ನಂಬಿ ಉದ್ರಿಕ್ತ ಗುಂಪುಗಳು ಇಬ್ಬರನ್ನು ಕೊಂದು, ಕೆಲ ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಎರಡು ಪ್ರತ್ಯೇಕ ಘಟನೆಗಳು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಬುಧ್ರ್ವಾನ್‍ನಲ್ಲಿ ಶಿಶು ಹಂತಕನೆಂಬ ಶಂಕೆಯ ಮೇಲೆ ಒಬ್ಬ ವ್ಯಕ್ತಿಯನ್ನು ಥಳಿಸಿ ಕೊಲ್ಲಲಾಗಿದೆ. ಈ ಘಟನೆ ಬಳಿಕ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿ ಬಸ್ಸೊಂದಕ್ಕೆ ಬೆಂಕಿ ಹಚ್ಚಲಾಗಿದೆ.  ಇದೇ ರೀತಿಯ ಸಂಶಯದ ಮೇಲೆ ಕೋಲ್ಕತಾ ವಿಮಾನನಿಲ್ದಾಣದ ಬಳಿ ಭಿಕ್ಷುಕನೊಬ್ಬನನ್ನು ಉದ್ರಿಕ ಗುಂಪು ಥಳಿಸಿ ಕೊಂದು ಹಾಕಿತ್ತು.

ಮತ್ತೊಂದು ಪ್ರಕರಣದಲ್ಲಿ ಮಹಿಳೆಯರ ಮೇಲೂ ದಾರುಣ ಹಲ್ಲೆ ನಡೆಸಲಾಗಿದೆ. ತೀವ್ರ ಗಾಯಗೊಂಡಿರುವ 70 ವರ್ಷ ಅನಿವಾಸಿ ಭಾರತೀಯ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಹೂಗ್ಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಪರ್ಣಾ ಘೋಷ್ ಎಂಬ ಮಹಿಳೆ ಮತ್ತು ಅವರ ಎನ್‍ಆರ್‍ಐ ತಾಯಿ ತಾವು ತಲುಪಬೇಕಾದ ಸ್ಥಳದ ಬಗ್ಗೆ ಸ್ಥಳೀಯರ ಬಳಿ ದಾರಿ ಕೇಳಿದರು. ಆದರೆ ಅಲ್ಲಿದ್ದ ಗುಂಪೊಂದು ಇವರು ಮಕ್ಕಳ ಅಪಹರಣಕಾರರು ಎಂದು ಶಂಕಿಸಿ ಮಾರಕವಾಗಿ ಥಳಿಸಿ, ಲೈಂಗಿಕ ಕಿರುಕುಳ ನೀಡಿ, ನಗ-ನಾಣ್ಯ ದೋಚಿತ್ತು. ಅಲ್ಲದೇ ಕಾರಿನಲ್ಲೇ ಅವರನ್ನು ಜೀವಂತ ದಹನ ಮಾಡಲು ಯತ್ನಿಸಿತು. ಸಕಾಲದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಅನಾಹುತ ತಪ್ಪಿಸಿದರು. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ.

ಭೀಕರ ಅಪರಾಧ ಕೃತ್ಯಗಳು ನಡೆದಿರುವ ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದಲ್ಲಿ ಅತಂಕದ ವಾತಾವರಣ ಸೃಷ್ಟಿಸಿದ್ದಕ್ಕಾಗಿ 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಇವರಲ್ಲಿ 15 ವರ್ಷದ ವಿದ್ಯಾರ್ಥಿಯೂ ಸೇರಿದ್ದಾನೆ. ಬಂಧಿತರೆಲ್ಲರೂ ತಮ್ಮ ಮೊಬೈಲ್ ಫೋನ್‍ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹರಡಿದ್ದರು.  ಜಾಲತಾಣಗಳಲ್ಲಿ ಹುಸಿ ವದಂತಿಗಳನ್ನು ಹರಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವವರ ಬಗ್ಗೆ ಜಾಗರೂಕರಾಗಿ ಇರುವಂತೆ ಪೊಲೀಸರು ರಾಜ್ಯದಾದ್ಯಂತ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಧ್ವನಿವರ್ಧಕದ ಮೂಲಕ ತಿಳಿಸುತ್ತಿದ್ದಾರೆ. ರಾಜ್ಯವ್ಯಾಪಿ ಉದ್ಭವಿಸಿರುವ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಪೊಲೀಸ್ ಮಹಾನಿರ್ದೇಶಕ ಸುರ್ಜಿತ್‍ಕರ್ ಪುರಕಾಯಸ್ಥ ತುರ್ತು ಸುದ್ದಿಗೋಷ್ಠಿ ನಡೆಸಿದರು. ಇಂಥ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin