ಹೂವಿನ ಮೇಲೆ ಏಣೀ ಬಣ್ಣ ಅದು ನಿನ್ನ ಕೆನ್ನೆಯಿಂದ ಕಳುವಾಗೈತಿ

13

ಲಕ್ಕುಂಡಿ,ಫೆ.13- ದ್ವೇಷ ಮತ್ಸರಗಳ ಆದಿಯಲ್ಲಿ ಕುದಿಯುತ್ತಿರುವ ಮಾನವ ಜಗತ್ತಿಗೆ ಇಂದು ಪ್ರೀತಿ ಬಹು ಅಗತ್ಯದ ಸಂಜೀವಿನಿಯಾಗಿದೆ. ಆ ಪ್ರೀತಿಯ ಸಿಂಚನ ನೀಡುವ ಛಾತಿಯಿರುವ ಕವಿಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಶಾಯರಿ ಕವಿ ಈರಣ್ಣ ಇಟಗಿ ನುಡಿದರು.ಲಕ್ಕುಂಡಿ ಉತ್ಸವ-2017ರ ಕವಿಗೋಷ್ಠಿಯನ್ನು ಅಜಗಣ್ಣ-ಮುಕ್ತಾಯಕ್ಕ ಸಮಾನಾಂತರ ವೇದಿಕಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಾ ಜಗತ್ತು ಇಂದು ಹಲವಾರು ರಂಗಗಳ ಮಾಫಿಯಾಗಳಿಂದ ಸುತ್ತುವರೆದಿದೆ. ಮಾನವನನ್ನು ಇವುಗಳಿಂದ ಹೊರತರುವ ಶಕ್ತಿ ಕವಿ ಹೃದಯಕ್ಕೆ ಅವರ ಸೃಷ್ಠಿಗೆ ಸಾಧ್ಯ. ಮೂರೇ ಮೂರು ಅಕ್ಷರಗಳ ಕವಿತೆ ಇಡೀ ವಿಶ್ವವನ್ನೆ ಆವರಿಸುವ ಪ್ರಭಾವಳಿ ಹೊಂದಿದ್ದು, ಅತ್ಯಂತ ಕಡಿಮೆ ಪದಗಳಲ್ಲಿ ಬಹುದೊಡ್ಡ ಅರ್ಥ ಮೂಡಿಸುವುದೇ ಕಾವ್ಯದ ಮುಖ್ಯ ಗುಣ ಎನ್ನುವುದನ್ನು ತಮ್ಮ ಶಾಯರಿಗಳ ಝಲಕುಗಳ ಮೂಲಕ ಈರಣ್ಣ ಇಟಗಿ ವಿವರಿಸಿದ್ದು ವಿಶೇಷವಾಗಿತ್ತು.

ಮಂಜುನಾಥ ಬಮ್ಮನಕಟ್ಟಿ ತಮ್ಮ ಆಶಯದ ನುಡಿಗಳಲ್ಲಿ ಇಡೀ ನಾಡಿನ ಚಿಂತನೆಗಳನ್ನು ಒರೆಗೆ ಹಚ್ಚುವ ಶಕ್ತಿ ಕಾವ್ಯಕ್ಕಿದೆ. ಕಾಲ ಕಾಲಕ್ಕೆ ಬದಲಾಗುವ ಕವಿತೆ ಇಂದು ಸಾಮಾಜಿಕ ಜಲತಾಣಗಳಲ್ಲಿ ತಕ್ಷಣದ ಪ್ರತಿಕ್ರಿಯೆ ಪ್ರಕಾರವಾಗಿ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ಧ್ಯಾನಸ್ಥ ಮನಸ್ಸಿನಲ್ಲಿ ಒಡಮೂಡುವ ಅದ್ಭುತ ವಿಷಯಗಳ ಕನ್ನಡಿಯೇ ಕಾವ್ಯ ಅದು ಅವಸರಕ್ಕೆ ದೊರೆಯುವದಲ್ಲ. ನಮ್ಮ ಕಾವ್ಯ ಪರಂಪರೆಯನ್ನು ಅರಿಯದೇ ಜನಮನಸದ ಕವಿಗಳಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಕವಿಗೋಷ್ಠಿಯಲ್ಲಿ ಬಾಳು ಬದುಕಿನ ಹತ್ತು ಹಲವಾರು ಸಂಗತಿಗಳು ಆಧ್ಯಾತ್ಮದ ಸಾಧನೆ, ಸಂಸಾರ ವಿಷಯಗಳ ಕಷ್ಟ ಸುಖ, ಪ್ರೇಮಿಗಳ ಬಿಸಿ ಉಸಿರುಗಳ ಕವಿತೆ ಒಂದೆಡೆಯಾದರೆ ಹಡೆದ ತಾಯಿಯ ಸಂಕಷ್ಟದ ಜೀವನ ಜೊತೆಗೆ ಪರಿಸರ, ಮಹಾದಾಯಿ ಹೋರಾಟ, ಕಪ್ಪತಗುಡ್ಡ ರಕ್ಷಣೆ ಮುಂತಾದ ಸಾಮಾಜಿಕ ಜ್ವಲಂತ ಸಮಸ್ಯೆಗಳ ಕುರಿತ ಕವನಗಳು ವಾಚಿಸಲ್ಪಟ್ಟವು.

ಶಿಲ್ಪ ಮಲ್ಲಿಗೆಯಾಗಿ ಅರಳಿದ ಹೊತ್ತಿನ ಎನ್ನ ಧರ್ಮದೇವತೆ ಕವನ ವಾಚಿಸಿದ ನೀಲಕಂಠ ಮರಡಿ, ದೊಡಮನಿಯವರ ನನ್ನವ್ವ, ಈರಪ್ಪ ಮಾದರ ಅವರ ವೈಶಾಖದ ಹೆಣ್ಣು, ಡಾ. ಗಿರೀಜ ಅವರ ಪರಿಪೂರ್ಣತೆ, ಅಲ್ಲದೇ ಕವಿಗಳಾದ ನಾಗರಾಜ ಗುಡೇದ, ಶಂಕರ ಕುಕನೂರ, ಸಿದ್ದು ಶೆಟ್ಟಣ್ಣವರ, ವಿವೇಕಾನಂದ ಪಾಟೀಲ, ಎ.ಎಸ್. ಮಕಾನದಾರ, ಕಳಕೇರಿ, ವೆಂಕಟೇಶಯ್ಯ, ಲಕ್ಷ್ಮೀ ದೇವಿ ಗವಾಯಿ, ಬಸವಾರಜ ಯಲದೇರಿ, ಎಂ.ಬಿ. ಮಾದರ, ಹಾಗೂ ಡಾ. ಎಚ್.ಡಿ. ಪೂಜರ ತಮ್ಮ ಕವನಗಳನ್ನು ವಾಚಿಸಿದರು. ಅಲ್ಲಮಪ್ರಭು ಬೆಟ್ಟದೂರ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin