ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಇಳಿಸಿ ದಾರಿ ಮಾಹಿತಿ ಕೇಳಿದ ಪೈಲೆಟ್..! (Video)
ಅಸ್ಟಾನ, (ಕಜಕಿಸ್ತಾನ), ಫೆ.23-ನೀವು ಹೆದ್ದಾರಿಯಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿರುತ್ತೀರಿ. ನಿಮ್ಮ ಮುಂದೆ ರಸ್ತೆಯಲ್ಲಿ ಹಠಾತ್ ಶಸ್ತ್ರಸಜ್ಜಿತ ಮಿಲಿಟರಿ ಹೆಲಿಕಾಪ್ಟರ್ ಇಳಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ. ನೀವು ಗಾಬರಿಗೆ ಒಳಗಾಗುತ್ತೀರಿ ಅಲ್ಲವೇ? ಇಂಥದ್ದೊಂದು ಅನುಭವ ಕಜಕಿಸ್ತಾನದಲ್ಲಿ ಟ್ರಕ್ ಚಾಲಕನೊಬ್ಬನಿಗೆ ಆಗಿದೆ. ಅಸ್ತಾನದ ಹಿಮಾಚ್ಛಾದಿತ ಹೆದ್ದಾರಿಯೊಂದರಲ್ಲಿ ಟ್ರಕ್ಕೊಂದರ ಮುಂದೆ ಎಂಐ-8 ಯುದ್ಧ ಹೆಲಿಕಾಪ್ಟರ್ ಇಳಿದಿದೆ. ಇದರಿಂದ ಟ್ರಕ್ ಚಾಲಕ ಹೆದರಿ ಹೌಹಾರಿದ. ಆದರೆ ಅಂಥದ್ದೇನೂ ಆಗಲಿಲ್ಲ. ಹೆಲಿಕಾಪ್ಟರ್ನಿಂದ ಇಳಿದ ಮಿಲಿಟರಿ ಸಮವಸ್ತ್ರಧಾರಿ ಪೈಲೆಟ್ ನಸುನಗುತ್ತಾ ಟ್ರಕ್ ಬಳಿ ಬಂದು ಚಾಲಕನ ಕೈಕುಲುಕಿದ್ದಾನೆ. ಮುಂದೆ ಹೋಗಬೇಕಾದ ದಾರಿಯ ಬಗ್ಗೆ ಮಾಹಿತಿ ಕೇಳಿದ್ದಾನೆ. ನಂತರ ಧನ್ಯವಾದ ಹೇಳಿ ಹೆಲಿಕಾಪ್ಟರ್ ಮುನ್ನಡೆಸಿದ್ದಾನೆ (ಹೆದ್ದಾರಿಯಲ್ಲಿ ಅಲ್ಲ..!).
ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ಇಳಿಸಿ ಲಾರಿ… https://t.co/VNS7sKNGGF
— EeSanjeNews l ಈ ಸಂಜೆ (@eesanjenews) February 23, 2017
ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ರಕ್ಷಣಾ ಇಲಾಖೆ, ಇದು ತರಬೇತಿ ಪಡೆಯುತ್ತಿದ್ದ ಪೈಲೆಟ್ಗಳಿದ್ದ ಹೆಲಿಕಾಪ್ಟರ್. ಮಾರ್ಗ ತಪ್ಪಿ ಈ ಆಚಾತುರ್ಯ ಆಗಿದೆ. ನಂತರ ಇದು ಸುರಕ್ಷಿತವಾಗಿ ತನ್ನ ನೆಲೆ ಸೇರಿದೆ ಎಂದು ತಿಳಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >