‘ಹೆಬ್ಬುಲಿ’ಗೆ ಕ್ರೇಜಿಸ್ಟಾರ್ ಮತ್ತೆ ಸಾಥ್
ಕಿಚ್ಚ ಸುದೀಪ್ ಈವರೆಗೆ ಕಾಣಿಸಿಕೊಳ್ಳದಿದ್ದ ಪಾತ್ರವೊಂದಕ್ಕೆ ಜೀವ ತುಂಬಿರೋ ಚಿತ್ರ ಹೆಬ್ಬುಲಿ. ಹೆಸರಲ್ಲೇ ಪೋರ್ಸ್ ಇರೋ ಈ ಚಿತ್ರದ ಚಿತ್ರೀಕರಣ ಯಾವ ಹಂತದಲ್ಲಿದೆ, ಯಾವಾಗ ತೆರೆ ಕಾಣುತ್ತೆ ಅಂತೆಲ್ಲ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೂ ಕುತೂಹಲಗೊಂಡಿದ್ದಾರೆ. ಅದನ್ನು ಸಾಧ್ಯವಾಗಿಸಿರುವವರು ಎಸ್.ಆರ್.ವಿ. ಪ್ರೊ ಡಕ್ಷನ್ಸ್ನ ರಘುನಾಥ್ ಮತ್ತು ಉಮಾಪತಿ ಪಿಕ್ಚರ್ಸ್ನ ಉಮಾಪತಿ. ಹೆಬ್ಬುಲಿ ಪಕ್ಕಾ ಆರ್ಮಿ ಬೇಸ್ಡ್ ಚಿತ್ರ. ಇಲ್ಲಿ ಸುದೀಪ್ ದೇಶಕ್ಕೆ ಕಂಟಕವಾಗಿರೋ ಉಗ್ರರನ್ನುಸದೆ ಬಡಿಯುವ ಸ್ಪಾ ಕಮಾಂಡರ್ ಆಗಿ ನಟಿಸಿದ್ದಾರೆ. ಇದೀಗ ಹೆಬ್ಬುಲಿಯ ಶೇ.90ರಷ್ಟು ಭಾಗದ ಚಿತ್ರೀಕರಣ ಸಂಪೂರ್ಣವಾಗಿದೆ. ಬೆಂಗಳೂರು, ಮೈಸೂರು ಮತ್ತು ಗೋವಾ ಮುಂತಾದೆಡೆಗಳಲ್ಲಿ ಬೇಕಾದ ಲೊಕೇಷನ್ನುಗಳಿಗಾಗಿ ತಲಾಷು ನಡೆಸಿ ಚಿತ್ರೀಕರಣ ಮಾಡಲಾಗಿದೆಯಂತೆ.
ಈ ಕಥೆ ಇಂಡೋ ಪಾಕ್ ನಡುವಿನ ಉಗ್ರರ ದಮನದ ಕಥಾ ಎಳೇ ಹೊಂದಿರೋದರಿಂದ ಅದರ ಹೆಬ್ಬಾಗಿಲಿನಂತಿರುವ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಲೇಬೇಕಿತ್ತು. ಅದರಂತೆಯೇ ನಿರ್ದೇಶಕ ಕೃಷ್ಣ ಸಾರಥ್ಯದಲ್ಲಿ ಸುದೀಪ್, ಅಮಲಾ ಪೌಲ್, ಚಿಕ್ಕಣ್ಣ ಸೇರಿದಂತೆ ಐವತ್ತು ಕಲಾವಿದರೂ ಉತ್ಸಾಹದಿಂದಲೇ ಹೊರಟಿದ್ದರು. ಆದರೆ ಕಾಶ್ಮೀರದಲ್ಲಿನ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದುದರಿಂದ ಓಡಾಟವೇನಿದ್ದರೂ ರಾತ್ರಿ ಹೊತ್ತಲ್ಲೇ ನಡೆಸಬೇಕಾಗಿತ್ತು.
ಕಡೆಗೂ ಸರ್ಕಸ್ಸು ನಡೆಸಿ ಪೊಲೀಸ್ ಬಂದೋಬಸ್ತ್ನಲ್ಲಿಯೇ ಚಿತ್ರೀಕರಣ ನಡೆಸಲಾಗಿತ್ತು. ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ, ಮಾಣಿಕ್ಯ ಚಿತ್ರದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದ ಹಿಟ್ ಕಾಂಬಿನೇಷನ್ ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿ ಹೆಬ್ಬುಲಿ ಚಿತ್ರದ ಮೂಲಕ ಮತ್ತೊಮ್ಮೆ ಜೊತೆಯಾಗಿದೆ. ಇನ್ನು ಈ ಚಿತ್ರತಂಡ ಹಾಡಿಗಾಗಿ ಸ್ವಿಡ್ಜರ್ಲ್ಯಾಂಡ್ಗೆ ಹೊರಟಿದ್ದು, ನಾಲ್ಕು ಹಾಡು ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳು ಮುಗಿದರೆ ಚಿತ್ರ ಸಂಪೂರ್ಣವಾದಂತೆ. ಒಟ್ಟಾರೆ ಬಹಳಷ್ಟು ಸಾಹಸ ಮಾಡಿ ಅದ್ಧೂರಿಯಾಗಿ ಈ ಚಿತ್ರವನ್ನು ತೆರೆ ಮೇಲೆ ತರಲು ಚಿತ್ರತಂಡ ಅವಿರತ ಶ್ರಮಿಸುತ್ತಿದೆ.
► Follow us on – Facebook / Twitter / Google+