ಹೇಮಾವತಿ ರಕ್ಷಣೆಗೆ ಸರ್ವರ ಬೆಂಬಲ ಅಗತ್ಯ
ತುಮಕೂರು, ಸೆ.14- ತಮಿಳುನಾಡು ಕ್ಯಾತೆಯಿಂದ ತುಮಕೂರು, ಹಾಸನ ಜಿಲ್ಲೆಯ ಜೀವನಾಡಿಯಾದ ಹೇಮಾವತಿ ಜಲಾಶಯದ ನೀರು ತಮಿಳುನಾಡು ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರೀ ಗಂಡಾಂತರ ಎದುರಾಗಲಿದೆ. ಇದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೋರಾಟಕ್ಕೆ ನಿಂತಿದ್ದು, ಪಕ್ಷಭೇದ ಮರೆತು ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಕಳೆದ 25 ವರ್ಷಗಳಿಂದ ಗೊರೂರು ಜಲಾಶಯದಿಂದ ಹೇಮಾವತಿ ನದಿ ನೀರು ಜಿಲ್ಲೆಗೆ ಹರಿದು ತಿಪಟೂರು, ತುರುವೇಕೆರೆ, ಗುಬ್ಬಿ, ಕುಣಿಗಲ್, ಕೊರಟಗೆರೆ, ಮಧುಗಿರಿ ಜನರ ನೀರಿನ ದಾಹ ತೀರಿಸುತ್ತಿದೆ. ಅಲ್ಲದೆ, ನಗರದ ಮೂರೂವರೆ ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು ಬುಗುಡನಹಳ್ಳಿ ಮತ್ತು ಹೆಬ್ಬಾಳ ಕೆರೆಯಲ್ಲಿ ಸಂಗ್ರಹಿಸಿ ಶುದ್ಧೀಕರಿಸಿ ಕುಡಿಯಲು ಬಿಡಲಾಗುತ್ತದೆ. ಇಂತಹ ನದಿ ನೀರು ತಮಿಳುನಾಡು ಪಾಲಾಗುತ್ತಿರುವುದು ನಾಗರಿಕರನ್ನು ಆತಂಕಕ್ಕೀಡುಮಾಡಿದೆ.
ಈಗಾಗಲೇ ಮಳೆ ಸಮರ್ಪಕವಾಗಿ ಬೀಳದ ಪರಿಣಾಮ ಈಗಲೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇನ್ನು ಜನವರಿ, ಫೆಬ್ರವರಿ, ಮಾರ್ಚ್ನಲ್ಲಿ ದೇವರೇ ಗತಿ..! ನೀರಿಗಾಗಿ ಕಾಳಗವೇ ನಡೆಯುವ ಸನ್ನಿವೇಶಗಳು ಎದುರಾಗುವುದರಲ್ಲಿ ಸಂದೇಹವಿಲ್ಲ.ಯಾವುದೇ ಕಾರಣಕ್ಕೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಮಾಜಿ ಪ್ರಧಾನಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ರೇವಣ್ಣ ಸೇರಿದಂತೆ ಮತ್ತಿತರ ಮುಖಂಡರು ಹೋರಾಟಕ್ಕೆ ಇಳಿದಿದ್ದು, ಇವರಿಗೆ ಜನತೆ ಕೈ ಜೋಡಿಸಬೇಕಿದೆ.ಪ್ರತಿವರ್ಷ ಜಿಲ್ಲೆಗೆ 25 ಟಿಎಂಸಿ ನೀರು ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ 560 ಕೋಟಿ ರೂ. ವೆಚ್ಚದಲ್ಲಿ ನಾಲೆಯನ್ನೂ ಸಹ ಆಧುನೀಕರಿಸಲಾಗಿದೆ. ಆದರೆ, ಇತ್ತೀಚೆಗೆ ನಡೆದ ನೀರಾವರಿ ಸಮಿತಿ ಸಭೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ಏಳು ಟಿಎಂಸಿ ನೀರನ್ನು ಹರಿಸುವಂತೆ ನಿರ್ಧರಿಸಲಾಗಿತ್ತು. ಆದರೆ, ನಾಲೆ ಹಾನಿ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದ ಆ ನೀರು ಸಹ ಹರಿಯಲು ಸಾಧ್ಯವಾಗಿಲ್ಲ. ಈಗ ತಮಿಳುನಾಡಿಗೆ ಹರಿಯುತ್ತಿದ್ದು, ಹೇಮೆಯ ಒಡಲು ಖಾಲಿಯಾಗಲಿದೆ.
ಇದರಿಂದ ಹಾಸನ, ಶ್ರವಣಬೆಳಗೊಳ, ಬೆಂಗಳೂರು ಗ್ರಾಮಾಂತರದ ಕೆಲ ತಾಲೂಕುಗಳಿಗೆ ಈ ನೀರು ಹರಿಯುತ್ತಿದ್ದು, ಈಗ ತಮಿಳುನಾಡು ಕ್ಯಾತೆಯಿಂದ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ.ಇದು ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ನೀರು ಹರಿಸಬಾರದೆಂದು ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಹೋರಾಟ ನಡೆಸಲು ಮುಂದಾಗಿದ್ದು, ಹೇಮೆ ನೀರನ್ನು ಅವಲಂಬಿಸಿರುವ ಎಲ್ಲ ಜನತೆ, ಎಲ್ಲ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಕೈ ಜೋಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.