ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ‘ಸುಪ್ರೀಂ’ ನ್ಯಾಯಾಂಗ ನಿಂದನೆ ಆರೋಪ : ಇತಿಹಾಸದಲ್ಲೇ ಇದೇ ಮೊದಲು
ನವದೆಹಲಿ, ಫೆ.8– ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಆರೋಪ ದಾಖಲಿಸಿದೆ.
ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ದೇಶದ ಇತರೆ ನ್ಯಾಯಾಧೀಶರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿರುವ ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ನನ್ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ದಾಖಲಿಸಿಕೊಂಡಿದೆ.
ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಿರುವ ಪ್ರಕರಣ ಇದಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ, ಜೆ.ಚಲಮೇಶ್ವರ್, ರಂಜನ್ ಗೋಗಯ್, ಮದನ್ ಬಿ.ಲೋಕೂರ, ಪಿ.ಸಿ.ಘೋಷ್ ಹಾಗೂ ಕುರಿಯನ್ ಜೋಸೆಫ್ ಅವರನ್ನೊಳಗೊಂಡ ಪೀಠ ನ್ಯಾಯಾಂಗ ನಿಂದನೆ ಬಗ್ಗೆ ವಿಚಾರಣೆ ನಡೆಸಲಿದೆ. ಒಂದು ವೇಳೆ ಕರ್ನನ್ ನ್ಯಾಯಾಧೀಶರ ವಿರುದ್ಧ ಟೀಕೆ ಮಾಡಿರುವುದು ಸಾಬೀತಾದರೆ ಅವರನ್ನು ವಜಾ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಯಾವುದೇ ನ್ಯಾಯಾಧೀಶರು ತಪ್ಪು ಮಾಡಿದರೆ ಸಂಸತ್ತಿಗೆ ಶಿಫಾರಸು ಮಾಡಲಾಗುತ್ತಿತ್ತು. ಮೂರನೆ ಎರಡರಷ್ಟು ಬಹುಮತದ ಮೂಲಕ ಅವರ ವಿರುದ್ಧ ವಾಗ್ದಂಡನೆ ವಿಧಿಸಿ ಹುದ್ದೆಯಿಂದ ವಜಾಗೊಳಿಸುವ ಪ್ರಕ್ರಿಯೆ ಇತ್ತು.
ಇದೀಗ ಸುಪ್ರೀಂಕೋರ್ಟ್ನ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಿ ನ್ಯಾಯಾಧೀಶರನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಸಲಿದೆ. ಹಾಗೊಂದು ವೇಳೆ ಇದು ಋಜುವಾತಾದರೆ ದೇಶದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನ್ಯಾಯಾಧೀಶರ ವಿರುದ್ಧ ಟೀಕಿಸಿ ಹುದ್ದೆ ಕಳೆದುಕೊಂಡ ಪ್ರಥಮ ನ್ಯಾಯಾಧೀಶ ಎಂಬ ಅಪಕೀರ್ತಿಗೆ ಕರ್ನನ್ ಪಾತ್ರರಾಗಲಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >