ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇವೆ ಒಟ್ಟು 16,24,233 ಪ್ರಕರಣಗಳು

TB--JAYACHANDRA

ಬೆಳಗಾವಿ, ನ.30- ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಸಿವಿಲ್, ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಒಟ್ಟು 16,24,233 ಮೊಕದ್ದಮೆಗಳು ಬಾಕಿ ಉಳಿದಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಗಣೇಶ್ ಕಾರ್ನಿಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2016, ಅಕ್ಟೋಬರ್ 31ರ ಅಂತ್ಯಕ್ಕೆ ಹೈಕೋರ್ಟ್‍ನಲ್ಲಿ 2,48,964 ಸಿವಿಲ್ ಪ್ರಕರಣಗಳು, 23,561 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ 272525 ಪ್ರಕರಣಗಳ ಮೊಕದ್ದಮೆ ಬಾಕಿ ಇವೆ. ಅಧೀನ ನ್ಯಾಯಾಲಯಗಳಲ್ಲಿ 70,341 ಸಿವಿಲ್ ಹಾಗೂ 6,49,367 ಕ್ರಿಮಿನಲ್ ಮೊಕದ್ದಮೆಗಳು ಇದ್ದು, ಒಟ್ಟು 1,35,108 ಮೊಕದ್ದಮೆಗಳು ಬಾಕಿ ಉಳಿದಿವೆ ಎಂದು ವಿವರಿಸಿದರು.

ಈ ಮೊಕದ್ದಮೆಗಳಲ್ಲಿ ಸರ್ಕಾರ ಪ್ರತಿವಾದಿಯಾಗಿ 91,540 ಪ್ರಕರಣಗಳನ್ನು ಇತ್ಯರ್ಥ ಪಡಿಸಿದೆ. ರಾಷ್ಟ್ರೀಯ ಕಾನೂನು ಸೇವೆ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸಾರ್ವಜನಿಕರಿಗೆ ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ 2016ರ ಫೆಬ್ರವರಿಯಿಂದ ನವೆಂಬರ್ ಅಂತ್ಯದವರೆಗೆ ಕಾನೂನು ಅದಾಲತ್‍ಗಳನ್ನು ಹಮ್ಮಿಕೊಂಡು 20,92,367 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಸುಪ್ರೀಂಕೋರ್ಟ್‍ನಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿಲ್ಲ. ಹೈಕೋರ್ಟ್‍ನಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದು, ನ್ಯಾಯಮೂರ್ತಿಗಳಿಗೆ ಇಲಾಖೆ ವತಿಯಿಂದ ಪತ್ರ ಬರೆದು ಆದ್ಯತೆ ಮೇರೆಗೆ ಪ್ರಕರಣಗಳ ಇತ್ಯರ್ಥ ಪಡಿಸುವಂತೆ ಮನವಿ ಮಾಡುವುದಾಗಿ ಸಚಿವರು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin