ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರ ವೇತನ ಶೇ.200ರಷ್ಟು ಹೆಚ್ಚಳ..!
ನವದೆಹಲಿ, ಮಾ.26-ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರ ವೇತನವನ್ನು ಹೆಚ್ಚಿಸಬೇಕೆಂಬ ಸರ್ವೋಚ್ಚ ನ್ಯಾಯಾಲಯದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ಈ ನ್ಯಾಯಾಲಯಗಳ ನ್ಯಾಯಮೂರ್ತಿಗ ಸಂಬಳ ಶೇ.200ರಷ್ಟು ಹೆಚ್ಚಾಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗೆ ವೇತನ ಪರಿಷ್ಕರಣೆ ಮಾಡಲಾಗಿದ್ದು, ಇದನ್ನು ಸರ್ವೋನ್ನತ ಮತ್ತು ಉಚ್ಛ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗೂ ಅನ್ವಯಿಸಲು ಸರ್ಕಾರ ಸಮ್ಮತಿಸಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಅತಿ ಹೆಚ್ಚು ವೇತನ ಪಡೆಯುತ್ತಿರುವವರೆಂದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ). ಇತರ ಭತ್ಯೆಗಳನ್ನು ಹೊರತುಪಡಿಸಿ ಅವರಿಗೆ ಪ್ರಸ್ತುತ 1 ಲಕ್ಷ ರೂ. ಮಾಸಿಕ ವೇತನ ಲಭಿಸುತ್ತಿದೆ. ಅವರ ಸಂಬಳವು 2.8 ಲಕ್ಷ ರೂ.ಗಳಿಗೆ ಏರಿಕೆಯಾಗಲಿದ್ದು, ಇದರೊಂದಿಗೆ ಅಧಿಕೃತ ನಿವಾಸ, ಕಾರುಗಳು, ಸಿಬ್ಬಂದಿ ಮತ್ತು ಅನ್ವಯವಾಗುವ ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ಈಗ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರ ವೇತನವನ್ನು ಮಾಸಿಕ 2.5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ. ಅಲ್ಲದೇ ಸಂಪುಟ ಕಾರ್ಯದರ್ಶಿ, ಸಿಎಜಿ (ಮಹಾ ಲೇಖಪಾಲರು) ಮತ್ತು ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ಶ್ರೇಣಿಯಂಥ ಇತರ ಸೇವೆಗಳ ಮುಖ್ಯಸ್ಥರು ಮತ್ತು ಸಂವಿಧಾನಿಕ ಉನ್ನತಾಧಿಕಾರಿಗಳಿಗೆ ನೀಡುವ ಇತರ ಭತ್ಯೆಗಳನ್ನೂ ಸಹ ಕೊಡಲಾಗುತ್ತದೆ. ಸುಪ್ರೀಂಕೋರ್ಟ್ ಸಮಿತಿಯಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿಲ್ಲ. ಮೂರು ನ್ಯಾಯಾಧೀಶರ ಸಮಿತಿಯು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮಾಸಿಕ 3 ಲಕ್ಷ ರೂ.ಗಳ ವೇತನ ನೀಡವಂತೆ ಸಲಹೆ ಮಾಡಿತ್ತು.
< Eesanje News 24/7 ನ್ಯೂಸ್ ಆ್ಯಪ್ >