ಹೊಗಳುವವರು-ತೆಗಳುವವರಿಗೆ ಕೊಹ್ಲಿ ಕೊಟ್ಟ ಖಡಕ್ ಉತ್ತರ ಇದು

Kohli--02

ಸೆಂಚೂರಿಯನ್, ಫೆ.17- ವಿಶ್ವವಿಖ್ಯಾತ ಬ್ಯಾಟ್ಸ್ ಮೆನ್ ಗಳೊಂದಿಗೆ ನನ್ನನ್ನು ಹೋಲಿಕೆ ಮಾಡಬೇಡಿ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಆರು ಪಂದ್ಯಗಳ ಏಕದಿನ ಪಂದ್ಯದಲ್ಲಿ ಭಾರತ 5-1 ಅಂತರದಿಂದ ಗೆಲುವು ಸಾಧಿಸಿದೆ.  ಈ ಪಂದ್ಯದಲ್ಲಿ ಕೊಹ್ಲಿ 3 ಸೆಂಚುರಿ ಸೇರಿದಂತೆ 558 ರನ್‍ಗಳನ್ನು ಗಳಿಸಿರುವುದರಿಂದ ಅವರನ್ನು ವಿಶ್ವವಿಖ್ಯಾತ ಬ್ಯಾಟ್ಸ್‍ಮನ್ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ವರದಿ ಪ್ರಕಟವಾಗುತ್ತಿದ್ದಂತೆ ಹೇಳಿಕೆ ನೀಡಿರುವ ಕೊಹ್ಲಿ ಅವರು, ನಾನು ನಾನಾಗಿಯೇ ಇರುತ್ತೇನೆ. ನನ್ನನ್ನು ಯಾವುದೇ ವಿಶ್ವದರ್ಜೆಯ ಅತ್ಯುತ್ತಮ ಬ್ಯಾಟ್ಸ್ ಮೆನ್ ಗಳಿಗೆ ಹೋಲಿಕೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ನಾನು ಬ್ಯಾಟ್ ಹಿಡಿದು ಮೈದಾನಕ್ಕಿಳಿದಾಗ ಯಾವ ರೀತಿಯ ಆಟ ಆಡಬೇಕು, ನನ್ನ ಗೇಮ್‍ಪ್ಲಾನ್ ಏನು ಎಂಬುದನ್ನು ಮನದಟ್ಟು ಮಾಡಿಕೊಂಡು ಆಟವನ್ನು ಆನಂದಿಸುತ್ತ ಆಡುತ್ತೇನೆ. ಅದೇ ನನ್ನ ಗೆಲುವಿನ ಗುಟ್ಟು ಎನ್ನುತ್ತಾರೆ ಅವರು. ನನ್ನ ಆಟದ ವೈಖರಿ ಬಗ್ಗೆ ಕೆಲವರು ಏನು ಬೇಕಾದರೂ ಬರೆದುಕೊಳ್ಳಲಿ. ನನಗೆ ಅದರ ಅಗತ್ಯವಿಲ್ಲ. ನಾನು ನನ್ನ ತಂಡದ ಗೆಲುವಿಗಾಗಿ ಆಡುತ್ತೇನೆ ಅಷ್ಟೆ. ನಾನು ಚೆನ್ನಾಗಿ ಆಡಿದಾಗ ಹೆಡ್‍ಲೈನ್ಸ್ ಮಾಡುತ್ತಾರೆ. ಆದರೆ, ಮುಂದಿನ ಪಂದ್ಯದಲ್ಲಿ ಕಳಪೆ ಆಟ ಆಡಿದರೆ ಹೀಯಾಳಿಸುವುದು ತಪ್ಪುವುದಿಲ್ಲ ಎನ್ನುತ್ತಾರೆ ಕೊಹ್ಲಿ.

ಈ ಹಿಂದೆ ನನ್ನನ್ನು ಹೀಯಾಳಿಸಿದವರೇ ಹೆಚ್ಚು. ಅವರ ತೆಗಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಚೆನ್ನಾಗಿ ಆಡಿದಾಗ ಅವರು ಹೊಗಳುತ್ತಾರೆ. ಅದಕ್ಕೆಲ್ಲ ನಾನು ಬೆಲೆ ಕೊಡುವುದಿಲ್ಲ. ನನ್ನ ಆಟ ನಾನು ಆಡುತ್ತೇನೆ ಎಂದು ಖಡಕ್ ಉತ್ತರ ನೀಡಿದ್ದಾರೆ ವಿರಾಟ್ ಕೊಹ್ಲಿ.

Sri Raghav

Admin