ಹೊಸ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

ಬೆಂಗಳೂರು,ಡಿ.29-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 40 ವರ್ಷದ ದಾಖಲೆ ಮುರಿದು ಇಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು 1977 ಡಿ.31ರಂದು ಮುಖ್ಯಮಂತ್ರಿಯಾಗಿ ಐದು ವರ್ಷ 286ದಿನಗಳ ನಿರಂತರವಾಗಿ ಏಕಕಾಲದಲ್ಲಿ ಪೂರ್ಣಗೊಳಿಸಿದ್ದರು.  ಆ ನಂತರ ಬಂದಂತಹ ಯಾವ ಮುಖ್ಯಮಂತ್ರಿಗಳು ಕೂಡ ಸುದೀರ್ಘ ಐದು ವರ್ಷ ಅಧಿಕಾರ ಅನುಭವಿಸಲಿಲ್ಲ.   ಸಿದ್ದರಾಮಯ್ಯ ಅವರು ಇಂದಿಗೆ 4 ವರ್ಷ 230 ದಿನ ಮುಖ್ಯಮಂತ್ರಿಯಾಗಿ ಪೂರೈಸಿರುವುದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅಧಿಕಾರಾವಧಿಯ ದಾಖಲೆಯನ್ನು ಸರಿಗಟಿದ್ದಾರೆ. ಅಲ್ಲದೆ ಆ ದಾಖಲೆ ಮುರಿದು 4 ವರ್ಷ 231ನೇ ದಿನಕ್ಕೆ ಪಾದಾರ್ಪಣೆ ಮಾಡಿದ್ದು, 5 ವರ್ಷ ಪೂರ್ಣಗೊಳಿಸುವತ್ತ ಮುನ್ನಡೆದಿದ್ದಾರೆ.

ರಾಜ್ಯದ 22 ಮುಖ್ಯಮಂತ್ರಿಗಳ ಪೈಕಿ ಎಸ್.ನಿಜಲಿಂಗಪ್ಪ ಹಾಗೂ ದೇವರಾಜ ಅರಸು ಅವರು ಐದು ವಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ 1977ರ ನಂತರ ಬಂದಂತಹ ಮುಖ್ಯಮಂತ್ರಿಗಳ ಪೈಕಿ ಯಾವೊಬ್ಬ ಮುಖ್ಯಮಂತ್ರಿ ಕೂಡ ಆಡಳಿತ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಎಸ್.ಎಂ.ಕೃಷ್ಣ ಅವರು 4 ವರ್ಷ 230 ದಿನ ಆಡಳಿತ ನಡೆಸಿದ್ದರು. ದೇವರಾಜ ಅರಸು ನಂತರ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಎರಡು ವರ್ಷ 239 ದಿನ ಆಡಳಿತ ನಡೆಸಿದ್ದರೆ ರಾಮಕೃಷ್ಣ ಹೆಗಡೆ ಅವರು 3 ಅವಧಿಯಲ್ಲಿ ಸುಮಾರು 8 ವರ್ಷ ಕಾಲ ಆಡಳಿತ ನಡೆಸಿದ್ದರೂ ಏಕಕಾಲದಲ್ಲಿ ನಿರಂತರವಾಗಿ ಐದು ವರ್ಷ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.

ಆ ನಂತರ ಮುಖ್ಯಮಂತ್ರಿಯಾಗಿದ್ದ ಎಸ್.ಆರ್.ಬೊಮ್ಮಾಯಿ 281 ದಿನಗಳು, ವೀರೇಂದ್ರ ಪಾಟೀಲ್ 314 ದಿನಗಳು, ಎಸ್.ಬಂಗಾರಪ್ಪ ಎರಡು ವರ್ಷ 33 ದಿನಗಳು, ಎಂ.ವೀರಪ್ಪ ಮೊಯ್ಲಿ 2 ವರ್ಷ 22 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿ ಒಂದು ವರ್ಷ 172 ದಿನಗಳ ಕಾಲ ಮಾತ್ರ ಆಡಳಿತ ನಡೆಸಿದ್ದಾರೆ. ಜೆ.ಎಚ್.ಪಟೇಲ್ ಅವರು ಮೂರು ವರ್ಷ 129 ದಿನಗಳು, ಎಸ್.ಎಂ.ಕೃಷ್ಣ 4 ವಷ 230 ದಿನಗಳು, ಧರ್ಮಸಿಂಗ್ ಒಂದು ವರ್ಷ 245 ದಿನಗಳು, ಎಚ್.ಡಿ.ಕುಮಾರಸ್ವಾಮಿ 1 ವರ್ಷ 253ದಿನಗಳು, ಬಿ.ಎಸ್.ಯಡಿಯೂರಪ್ಪ ಒಮ್ಮೆ 7 ದಿನಗಳು ಮತ್ತೊಮ್ಮೆ ಮೂರು ವರ್ಷ 62 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ.

ಆನಂತರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಕೇವಲ 343ದಿನಗಳು ಹಾಗೂ ಜಗದೀಶ್ ಶೆಟ್ಟರ್ 304 ದಿನಗಳು ಮಾತ್ರ ಮುಖ್ಯಮಂತ್ರಿಯಾಗಿದ್ದರು. ಆದರೆ ಸಿದ್ದರಾಮಯ್ಯನವರು 2013ರಿಂದ ನಿರಂತರವಾಗಿ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದು, ಐದು ವರ್ಷ ಪೂರ್ಣಗೊಳಿಸುವ ಹೊಸ್ತಿನಲ್ಲಿದ್ದಾರೆ. ಇದು ರಾಜ್ಯದ ಮುಖ್ಯಮಂತ್ರಿಗಳ ಆಡಳಿತಾವಧಿಯ ಇತಿಹಾಸದಲ್ಲಿ ಕಳೆದ 40 ವರ್ಷದಲ್ಲೇ ಹೊಸ ದಾಖಲೆಯಾಗಿದೆ.  ಇನ್ನೊಂದು ವಿಶೇಷವೆಂದರೆ ದೇವರಾಜ ಅರಸು ಅವರು ಹಿಂದುಳಿದ ವರ್ಗಕ್ಕೆ ಸೇರಿದಂತೆ ಸಿದ್ದರಾಮಯ್ಯ ಅವರು ಕೂಡ ಹಿಂದುಳಿದ ವರ್ಗದವರಾಗಿರುವುದು ವಿಶೇಷ. ಈ ಇಬ್ಬರು ನಾಯಕರು ಕೂಡ ಮೈಸೂರು ಜಿಲ್ಲೆಯವರು ಎಂಬುದು ಮತ್ತೊಂದು ವಿಶೇಷ.

Sri Raghav

Admin