ಹೊಸ ಬೀದಿ ದೀಪ ನಿರ್ವಹಣೆಯಿಂದ ರಾತ್ರಿಯಿಡೀ ಝಗಮಗಸಲಿದೆ ಬೆಂಗಳೂರು

Lights-Night

ಬೆಂಗಳೂರು, ಏ.6- ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಅನಧಿಕೃತ ಚಟುವಟಿಕೆಗಳನ್ನು ಸೆರೆ ಹಿಡಿಯಲು ಅನುಕೂಲವಾಗುವಂತೆ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಹೊಸ ಬೀದಿ ದೀಪ ನಿರ್ವಹಣೆ ಜಾರಿಗೆ ತರಲಾಗಿದೆ. ೧೯೮ ವಾರ್ಡ್‍ಗಳನ್ನು 200 ಪ್ಯಾಕೇಜ್‍ಗಳಾಗಿ ವಿಂಗಡಿಸಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಹೊಸ ಬೀದಿ ದೀಪ ನಿರ್ವಹಣೆಗೆ ಬಿಬಿಎಂಪಿ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಭದ್ರೇಗೌಡ ಇಂದು ಚಾಲನೆ ನೀಡಿದರು. ಬೀದಿ ದೀಪ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಲು ಅನುಕೂಲವಾಗುವಂತೆ 200 ಪ್ಯಾಕೇಜ್‍ಗಳನ್ನಾಗಿ ವಿಂಗಡಿಸಲಾಗಿದ್ದು, ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರೇಗೌಡ ತಿಳಿಸಿದರು.

ಇತ್ತೀಚೆಗೆ ನಗರದಲ್ಲಿ ರಾತ್ರಿ ಮತ್ತು ನಸುಕಿನ ವೇಳೆ ಸರ ಅಪಹರಣ ರಾಬರಿಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳ್ಳಕಾಕರನ್ನು ಸೆರೆ ಹಿಡಿಯಲು ಅನುಕೂಲವಾಗುವಂತೆ ಪೊಲೀಸರು ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.   ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರ ಚಹರೆ ಸಿಸಿ ಟಿವಿಯಲ್ಲಿ ಸಮರ್ಪಕವಾಗಿ ಸೆರೆಯಾಗಬೇಕಾದರೆ ಅತ್ಯುತ್ತಮವಾದ ಬೀದಿ ದೀಪಗಳ ನಿರ್ವಹಣೆ ಅಗತ್ಯ. ಹೀಗಾಗಿ ನಗರದಲ್ಲಿ ಹೊಸ ಬೀದಿ ದೀಪ ನಿರ್ವಹಣಾ ಪದ್ಧತಿಯನ್ನು ಜಾರಿಗೆ ತರಲಾಗಿದೆ ಎಂದು ಅವರು ವಿವರಣೆ ನೀಡಿದರು.

ಬೀದಿ ದೀಪ ನಿರ್ವಹಣೆ ಗುತ್ತಿಗೆ ಪಡೆಯುವ ಗುತ್ತಿಗೆದಾರರು ಪ್ರತಿ ಪ್ಯಾಕೇಜ್ ವ್ಯಾಪ್ತಿಯಲ್ಲಿ ತಮ್ಮ ಕಚೇರಿ ತೆರೆಯಬೇಕು. ತಮ್ಮ ವ್ಯಾಪ್ತಿಯ 10 ಕಡೆಗಳಲ್ಲಿ ಕಚೇರಿ ವಿಳಾಸ, ದೂರವಾಣಿ, ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಲ್ಯಾಡರ್ ಹೊಂದಿರುವ ಜೀಪುಗಳನ್ನು ಹೊಂದಿರತಕ್ಕದ್ದು. ಸಾರ್ವಜನಿಕರಿಂದ ಬರುವ ದೂರುಗಳನ್ನು ದಾಖಲಿಸಿಕೊಂಡು 24 ಗಂಟೆಯೊಳಗೆ ಬೀದಿ ದೀಪ ದುರಸ್ತಿಪಡಿಸಬೇಕು. ಇದು ಸಾಧ್ಯವಾಗದಿದ್ದರೆ ಒಂದು ಲೈಟ್‍ಗೆ 100 ರೂ. ದಂಡ ಹಾಕಲಾಗುವುದು.

ವಿದ್ಯುತ್ ಅಭಾವ ಇರುವುದರಿಂದ ನಿಗದಿತ ವೇಳೆಯೊಳಗೆ ಬೀದಿ ದೀಪಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.  ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬೀದಿ ದೀಪ ಬೆಳಗದಿದ್ದರೆ ಹಾಗೂ ಹಗಲು ವೇಳೆಯೂ ದೀಪ ಉರಿಯುವುದು ಕಂಡು ಬಂದರೆ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.  ಬೀದಿ ದೀಪ ನಿರ್ವಹಣೆ ಬಗ್ಗೆ ದೂರು ನೀಡುವವರು ಕೇಂದ್ರ ಕಚೇರಿಯ 080-22975535/ 22221188 ದೂರವಾಣಿ ಸಂಖ್ಯೆಗೆ ಅಥವಾ ಆಯಾ ವಲಯಗಳ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರ ಕಚೇರಿಗಳಿಗೆ ದೂರು ನೀಡಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin