ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ಬಿಗ್ ಶಾಕ್ ನೀಡಿದ ಬಿಬಿಎಂಪಿ..!
ಬೆಂಗಳೂರು, ಡಿ.26- ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆ ಬಗೆಹರಿಯದಿದ್ದರೂ ಚಿಂತೆಯಿಲ್ಲ, ಕಸದ ಮೇಲೆ ಶೇ.15ರಷ್ಟು ಸೆಸ್ ವಿಧಿಸಲು ಬಿಬಿಎಂಪಿ ಮತ್ತೆ ಮುಂದಾಗಿದೆ.
ಇದೇ 28 ರಂದು ನಡೆಯಲಿರುವ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಆಸ್ತಿ ತೆರಿಗೆ ಮೇಲೆ ಶೇ.15ರಷ್ಟು ಕಸದ ಸೆಸ್ ವಿಧಿಸುವ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿದೆ. ಖಾಲಿ ನಿವೇಶನ, ಮನೆ, ವಾಣಿಜ್ಯ ಕಟ್ಟಡಗಳು, ಅಪಾರ್ಟ್ ಮೆಂಟ್, ಹೊಟೇಲ್, ನರ್ಸಿಂಗ್ ಹೋಂ, ಕೈಗಾರಿಕಾ ಕಟ್ಟಡಗಳ ಆಸ್ತಿ ತೆರಿಗೆ ಮೇಲೆ ಕಸದ ಸೆಸ್ ವಿಧಿಸಲು ಆರೋಗ್ಯ ಸ್ಥಾಯಿ ಸಮಿತಿ ನಿರ್ಣಯಿಸಿ ಮಂಡಿಸಿರುವ ಟಿಪ್ಪಣಿ ಬಿಬಿಎಂಪಿ ಮಾಸಿಕ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ನಗರವಾಸಿಗಳು ಮತ್ತೊಮ್ಮೆ ಶೇ.15ರಷ್ಟು ಕಸದ ಸೆಸ್ ಕಟ್ಟಲು ಹೊಸ ವರ್ಷದಿಂದ ತಯಾರಾಗಬೇಕಾಗಿದೆ.
ಈ ಮೂಲಕ ಹೊಸ ವರ್ಷಕ್ಕೆ ಸರ್ಕಾರ ಬೆಂಗಳೂರಿನ ಜನತೆಗೆ ಶಾಕ್ ನೀಡಲು ಮುಂದಾಗಿದೆ.
ವಾಸದ ಕಟ್ಟಡಗಳಿಗೆ ಒಂದು ಸಾವಿರ ಚದರಡಿವರೆಗೆ ಮಾಸಿಕ 10 ರೂ., ಸಾವಿರದಿಂದ 3 ಸಾವಿರ ಚದರಡಿಗೆ 30 ರೂ., 3ಚ.ಅ.ಸಾವಿರಕ್ಕಿಂತ ಮೇಲ್ಪಟ್ಟ ಆವರಣಕ್ಕೆ 50 ರೂ., ವಾಣಿಜ್ಯ ಕಟ್ಟಡಗಳಿಗೆ 50 ರಿಂದ 200 ರೂ. , ಕೈಗಾರಿಕಾ ಕಟ್ಟಡಗಳಿಗೆ 100 ರಿಂದ 300 ರೂ.ವರೆಗೆ, ಹೊಟೇಲ್, ಕಲ್ಯಾಣಮಂಟಪ, ನರ್ಸಿಂಗ್ಹೋಂಗಳಿಗೆ 300 ರಿಂದ 500ರೂ.ವರೆಗೆ ಶುಲ್ಕ ಭರಿಸಬೇಕಾಗಿತ್ತು. ಈಗ ಶೇ.15ರಷ್ಟು ಆಸ್ತಿ ತೆರಿಗೆ ಮೇಲೆ ಸೆಸ್ ಹೆಚ್ಚಿಸಲು ನಿರ್ಧರಿಸಿರುವುದರಿಂದ ನಗರದ ಜನತೆ ಹೊಸ ಹೊರೆ ಹೊರಬೇಕಾಗಿದೆ.
ನಗರದ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕಸದ ರಾಶಿಗಳು ಅಲ್ಲಲ್ಲಿ ಬಿದ್ದಿರುತ್ತವೆ. ಆದರೆ ಹೊಸದಾಗಿ ಕಸದ ಸೆಸ್ ಮಾತ್ರ ಕಟ್ಟಲು ಜನ ಮುಂದಾಗಬೇಕಾಗಿರುವುದು ವಿಪರ್ಯಾಸವಾಗಿದೆ.