ಹೊಸ ವರ್ಷಕ್ಕೆ ಶ್ರೀಸಾಮಾನ್ಯನಿಗೆ ಡಬಲ್ ಶಾಕ್..!

LPG-01

ನವದೆಹಲಿ, ಜ.01 : ಹೊಸ ವರ್ಷದ ಮೊದಲ ದಿನವೇ ಶ್ರೀಸಾಮಾನ್ಯನಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೊಸ ವರ್ಷದ ಖುಷಿಯಲ್ಲಿದ್ದವರಿಗೆ ಒಂದರಮೇಲೊಂದು ಶಾಕಿಂಗ್ ಸುದ್ದಿಗಳು ಬಂದೆರಗಿವೆ. ಒಂದೆಡೆ ಅಡುಗೆ ಅನಿಲದದ ದರದಲ್ಲಿ ಏರಿಕೆಯಾದರೆ ಮತ್ತೊಂದೆಡೆ ಪೆಟ್ರೊಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.  ಸಬ್ಸಿಡಿ ಸಹಿತ ಅಡುಗೆ ಅನಿಲ ಬೆಲೆಯನ್ನು 2 ರೂ. ಏರಿಕೆ ಮಾಡಲಾಗಿದೆ. 14.2 ಕೆ.ಜಿ. ಸಿಲಿಂಡರ್ 2 ರೂ. ಏರಿಕೆಯಾಗಿ 434.71 ರೂ. ತಲುಪಿದೆ. ಈ ಮೊದಲು 432.71 ರೂ. ಇತ್ತು. ಅದೇ ರೀತಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 1 ರೂ. ಏರಿಕೆ ಮಾಡಲಾಗಿದೆ.

ವಿಮಾನ ಇಂಧನ ಬೆಲೆಯಲ್ಲಿ ಪ್ರತಿ ಕಿಲೋ ಲೀಟರ್ ಗೆ ಶೇ.8.60 ರಷ್ಟು(4161 ರೂ.) ಏರಿಕೆಯಾಗಿ ದೆಹಲಿಯಲ್ಲಿ 52,540.63 ರೂ. ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಗ್ಯಾಸ್, ಸೀಮೆಎಣ್ಣೆ ಹಾಗೂ ವಿಮಾನ ಇಂಧನ ಬೆಲೆಯನ್ನು ಪರಿಷ್ಕರಿಸಿವೆ. ಇಂಧನ ದರವನ್ನು ಕಳೆದ ತಿಂಗಳು ಶೇ 3.7 ರಷ್ಟು ಇಳಿಕೆ ಮಾಡಲಾಗಿತ್ತು.

ಪೆಟ್ರೋಲ್ ಬೆಲೆಯಲ್ಲಿ ರೂ.1.29 ಮತ್ತು ಡೀಸೆಲ್ ಬೆಲೆಯಲ್ಲಿ 0.97 ರೂ. ಹೆಚ್ಚಳ : 

ಹೊಸ ವರ್ಷಕ್ಕೆ ವಾಹನ ಸವಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ, ಪೆಟ್ರೋಲ್- ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ರೂ.1.29 ಮತ್ತು ಡೀಸೆಲ್ ಬೆಲೆಯಲ್ಲಿ 0.97 ರೂ. ಹೆಚ್ಚಳವಾಗಿದ್ದು ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ. ಡಿಸೇಂಬರ್ 16 ರಂದು ಪೆಟ್ರೋಲ್ ಬೆಲೆಯಲ್ಲಿ ರೂ.2.21 ಮತ್ತು ಡೀಸೆಲ್ ಬೆಲೆಯಲ್ಲಿ 1.79 ರೂ. ಹೆಚ್ಚಳವಾಗಿತ್ತು. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಈ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವಾಗಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುತ್ತವೆ. ಅದರಂತೆ ಪೆಟ್ರೋಲ್ ರೂ1.29 ಮತ್ತು ಡೀಸೆಲ್ ಬೆಲೆಯಲ್ಲಿ 0.97 ರೂ. ಏರಿಕೆಯಾಗಿದೆ.

( ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.)

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin