ಹೊಸ ವರ್ಷದ ‘ನಶೆ’ಗೆ ವಿಷ ಸರ್ಪಗಳ ಬಳಕೆ : 70 ನಾಗರ,45 ಕೊಳಕುಮಂಡಲ ಹಾವುಗಳ ವಶ, ಇಬ್ಬರ ಬಂಧನ

Spread the love

Snakes-2-arrested

ಪುಣೆ, ಡಿ.28-ವಿಷಪೂರಿತ ಜಂತುಗಳಾದ ನಾಗರಹಾವು, ಕೊಳಕು ಮಂಡಲ ಮತ್ತು ಕಾಳಿಂಗ ಸರ್ಪಗಳ ಕಾರ್ಕೋಟಕ ವಿಷವನ್ನು ಮದ್ಯದಲ್ಲಿ , ಇಂಜೆಕ್ಷನ್‍ನಲ್ಲಿ ಸೇರಿಸಿ ಇನ್ನಷ್ಟು ನಶೆ ಏರಿಸುವ ವಸ್ತುವನ್ನಾಗಿ ಬಳಸುತ್ತಿರುವ ವ್ಯವಸ್ಥಿತ ಕಳ್ಳಸಾಗಣೆ ಜಾಲಗಳು ದೇಶದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬರುತ್ತಿವೆ.  ಪುಣೆಯ ಅಪಾರ್ಟ್‍ಮೆಂಟ್ ಒಂದರ ಮೇಲೆ ದಾಳಿ ನಡೆಸಿದ ಪುಣೆ ಪೊಲೀಸರು 70 ನಾಗರಹಾವುಗಳು ಹಾಗೂ 45 ಕೊಳಕುಮಂಡಲ ಸರ್ಪಗಳನ್ನು ಹಾಗೂ ವಿಷದ ಕೆಲವು ಬಾಟಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೊಸ ವರ್ಷದ ಪಾರ್ಟಿ ಡ್ರಗ್‍ಗೆ ಸರ್ಪ ವಿಷ ಪೂರೈಸುವ ಸ್ನೇಕ್ ಮಾಫಿಯಾಗೆ ಇವರು ಸೇರಿದ್ದು, ತನಿಖೆ ತೀವ್ರಗೊಂಡಿದೆ.

ಖಚಿತ ಸುಳಿವಿನ ಮೇಲೆ ಪುಣೆಯ ಚಾಣಕ್ ಪ್ರದೇಶದ ಅಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ಒಂದೇ ಸ್ಥಳದಲ್ಲಿ 70 ನಾಗರ ಹಾವುಗಳು ಮತ್ತು 45 ಕೊಳಕಮಂಡಲ ಸರ್ಪಗಳು ಪೆಟ್ಟಿಗೆಯಲ್ಲಿ ಇದ್ದದ್ದನ್ನು ನೋಡಿ ಹೌಹಾರಿದರು. ಅಲ್ಲದೇ ಕೆಲವು ಬಾಟಲ್‍ಗಳಲ್ಲಿ ವಿಷವನ್ನು ಸಂಗ್ರಹಿಸಡಲಾಗಿತ್ತು. ಈ ಸಂಬಂಧ ಅಪಾರ್ಟ್‍ಮೆಂಟ್‍ನಲ್ಲಿ ಬಾಡಿಗೆಯಲ್ಲಿದ್ದ ರಂಜಿತ್ ಖಾರಗೆ (37) ಮತ್ತು ಆತನ ಸಹಚರ ಧನಂಜಯ್ ಬೆಲ್‍ಕುಂಟೆ (31) ಎಂಬುವರನ್ನು ಬಂಧಿಸಲಾಗಿದೆ.  ಅರಣ್ಯಗಳಿಂದ ವಿಷಪೂರಿತ ಸರ್ಪಗಳು ಹಿಡಿದು ತಂದು ವಿಷ ತೆಗೆದು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಬಗ್ಗೆ ಆರೋಪಿಗಳು ತಪ್ಪೋಪ್ಪಿಕೊಂಡಿದ್ದಾರೆ.  ವಶಪಡಿಸಿಕೊಂಡ ಹಾವುಗಳನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.

ಸ್ನೇಕ್ ಮಾಫಿಯಾ:

ಸ್ನೇಕ್ ಮಾಫಿಯಾ ದಂಧೆಗೆ ಪುಷ್ಟಿ ನೀಡುವಂತೆ ಅರಣ್ಯಾಧಿಕಾರಿಗಳು ಇತ್ತೀಚೆಗೆ ಪಶ್ಚಿಮಬಂಗಾಳದ ಜಲಪೈಗುರಿ ಜಿಲ್ಲೆಯ ಫುಲ್ಬರಿ ಪ್ರದೇಶದಲ್ಲಿ ನಾಲ್ವರು ಕಳ್ಳಸಾಗಣೆದಾರರನ್ನು ಬಂಧಿಸಿ, 200 ಕೋಟಿ ರೂ. ಮೌಲ್ಯದ ಸರ್ಪ ವಿಷವನ್ನು ವಶಪಡಿಸಿಕೊಂಡಿದ್ದರು.  ಉದ್ಯಾನ ನಗರಿ ಬೆಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ತಡ ರಾತ್ರಿ ತನಕ ವಹಿವಾಟು ನಡೆಸುತ್ತಿದ್ದ ಐಷಾರಾಮಿ ಬಾರ್‍ಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಮದ್ಯ ತುಂಬಿದ್ದ ದೊಡ್ಡ ದೊಡ್ಡ ಬಾಟಲ್‍ಗಳಲ್ಲಿ ಸತ್ತ ಸರ್ಪಗಳು ಇದ್ದದ್ದನ್ನು ನೋಡಿ ಗಾಬರಿಗೊಂಡರು. ಸರ್ಪ ವಿಷವನ್ನು ಮದ್ಯದಲ್ಲಿ ವಿವಿಧ ರೂಪದಲ್ಲಿ ಸೇವಿಸಿದರೆ ನಶೆ ಜೋರಾಗಿ ಏರುತ್ತದೆ ಎಂಬ ಕಾರಣಕ್ಕಾಗಿ ಮದ್ಯ ಮತ್ತು ಮಾದಕವಸ್ತು ವ್ಯಸನಿಗಳು ದುಬಾರಿ ಬೆಲೆ ತೆತ್ತು ಇದನ್ನು ಖರೀದಿಸುತ್ತಾರಂತೆ.

ಬೆಂಗಳೂರು ಸೇರಿದಂತೆ ಭಾರತದ ವಿವಿಧ ಮಹಾನಗರಗಳಲ್ಲಿ ವಿಷಪೂರಿತ ಹಾವುಗಳ ಕಳ್ಳಸಾಗಣೆ ಮತ್ತು ಸರ್ಪ ವಿಷ ಮಾರಾಟದ ದಂಧೆ ಅವ್ಯಾಹತವಾಗಿ ಮುಂದುವರೆದಿದೆ. ಹಾವಿನಿಂದ ಕಚ್ಚಿಸಿಕೊಂಡು ಮತ್ತು ಚೇಳಿನಿಂದ ಕುಟುಕಿಸಿಕೊಂಡು ಡ್ರಗ್ಸ್ ಅಮಲೇರಿಸಿಕೊಳ್ಳುವ ಹೈಟೆಕ್ ಮಾದಕ ವ್ಯಸನಿಗಳ ಈಗಲೂ ಬೆಂಗಳೂರು ಮತ್ತು ಇತರ ಮಹಾನಗರಗಳಲ್ಲಿದ್ದಾರೆ.
ದೆಹಲಿ, ಮಹಾರಾಷ್ಟ್ರ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಈ ವ್ಯವಸ್ಥಿತ ಜಾಲ ನಿರ್ಭೀತಿಯಿಂದ ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯದಲ್ಲೂ ಈ ದಂಧೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವುದು ಅತಂಕದ ಸಂಗತಿಯಾಗಿದೆ. ಈ ರಾಜ್ಯಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ಬಸ್ ಮತ್ತು ರೈಲುಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ನಾವು ಅತ್ಯಂತ ಅಪಾಯಕಾರಿ ಸರಕು ಜೊತೆ ಪಯಣಿಸುತ್ತಿದ್ದೇವೆ ಎಂಬ ಗಂಡಾಂತರಕಾರಿ ಸಂಗತಿ ಗೊತ್ತೇ ಇರುತ್ತಿರಲಿಲ್ಲ. ಪೆಟ್ಟಿಗೆಗಳಲ್ಲಿ ನಾಗರಹಾವು ಮತ್ತು ಕಾಳಿಂಗ ಸರ್ಪಗಳನ್ನು ಇರಿಸಿ ಪ್ರಯಾಣಿಕರ ಲಗೇಜ್ ಮಾದರಿಯಲ್ಲಿ ಅವುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ರೇವ್ ಪಾರ್ಟಿ ಸಕ್ರ್ಯೂಟ್‍ಗಳಿಗೆ ವಿಷ ಪೂರೈಸಲು ಈ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.

ಭಾರತದ ವಿವಿಧೆಡೆ ಇತ್ತೀಚಿಗೆ ದಾಳಿ ನಡೆಸಿದ ಪರಿಸರ ಪ್ರೇಮಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಈ ಜಾಲವನ್ನು ಬೆಳಕಿಗೆ ತಂದಿವೆ. ಪ್ರತಿ ಬಾರಿ ದಾಳಿ ನಡೆಸಿದಾಗಲೂ ಸರ್ಕಾರಿ ಮತ್ತು ಖಾಸಗಿ ಬಸ್‍ಗಳಲ್ಲಿ ವಿಷಪೂರಿತ ಸರ್ಪಗಳು ಮತ್ತು ಹಾವಿನ ವಿಷಗಳನ್ನು ಪತ್ತೆ ಮಾಡಲಾಯಿತು. ಪ್ರೇಮಿಗಳ ದಿನಾಚರಣೆಗೂ ಕೆಲ ದಿನ ಹಿಂದೆ ನಡೆದ ದಾಳಿ ವೇಳೆ ಒಂದು ಪೆಟ್ಟಿಗೆಯಲ್ಲಿ ಐದು ದೊಡ್ಡ ಕಾಳಿಂಗ ಸರ್ಪಗಳು ಮತ್ತು ಒಂದು ಶೀಷೆಯಲ್ಲಿ ಅರ್ಧ ಲೀಟರ್‍ನಷ್ಟು ವಿಷವಿದ್ದದ್ದು ಕಂಡು ಬಂದಿತು.

ರಾಜಸ್ತಾನ ರೋಡ್‍ವೇಸ್ ಮೂಲಕ ದೆಹಲಿಯ ಸರಾಯ್ ಕಾಲೆ ಖಾನ್ ಬಸ್ ಟರ್ಮಿನಲ್‍ಗೆ ಬರುವ ಬಸ್‍ನಲ್ಲಿ ಈ ಡೆಡ್ಲಿ ಕಾರ್ಗೋ ಇದೆ ಎಂಬ ಮಾಹಿತಿ ಮೇರೆಗೆ ಕೆಲವು ತಿಂಗಳ ಹಿಂದೆ ಈ ದಾಳಿ ನಡೆಯಿತು. ದಾಳಿ ವೇಳೆ ಒಂದು ಕಿಂಗ್ ಕೋಬ್ರಾ ಸಾವಿಗೀಡಾಗಿದ್ದರೆ, ಇನ್ನು ನಾಲ್ಕು ಕಾಳಿಂಗ ಸರ್ಪಗಳು ತೀವ್ರ ನಿತ್ರಾಣಗೊಂಡಿದ್ದವು. ಇಂತಹ ಅದೆಷ್ಟೋ ಸ್ಮಗ್ಲಿಂಗ್ ಪ್ರಕರಣಗಳು ಈಗಲೂ ಮುಂದುವರೆಯುತ್ತಲೇ ಇವೆ. ಈ ಕಳ್ಳಸಾಗಣೆ ದಂಧೆ ಇತ್ತೀಚೆಗೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದು ಪತ್ತೆಯಾಗುತ್ತಿದೆ. ಪ್ರತಿ ಬಾರಿ ಹೊಸ ವರ್ಷಾಚರಣೆ ಮತ್ತು ವ್ಯಾಲೆಂಟೈನ್ಸ್ ಡೇ ಸಂದರ್ಭಗಳಲ್ಲಿ ಇಂಥ ಸರಕುಗಳ ಸಾಗಣೆ ಪ್ರಕರಣಗಳು ಅಧಿಕವೆಂಬುದು ದೃಢಪಟ್ಟಿದೆ. ಇತ್ತೀಚೆಗೆ ನಡೆದ ದಾಳಿಯಲ್ಲಿ ಐದು ಕೊಳಕು ಮಂಡಲ ಹಾವುಗಳು ಮತ್ತು ಅರ್ಧ ಲೀಟರ್ ನಾಗರಹಾವಿನ ವಿಷ ಪತ್ತೆಯಾಗಿತ್ತು.

ಪಾರ್ಟಿ ಡ್ರಗ್ ಆಗಿ ಸರ್ಪ ವಿಷವನ್ನು ವ್ಯಾಪಕವಾಗಿ ಬಳಸುತ್ತಿರುವುದರಿಂದ ಇದಕ್ಕೆ ಭಾರೀ ಬೇಡಿಕೆ. ರೇವ್ ಪಾರ್ಟಿ ಸರ್ಕಲ್‍ಗಳಲ್ಲಿ ಈ ಹಾವಿನ ವಿಷಕ್ಕೆ ಕೋಡ್ ವರ್ಡ್‍ನಿಂದ ಗುರುತಿಸಲಾಗುತ್ತದೆ. ನಾಗರ ಹಾವಿನ ವಿಷವನ್ನು ಏ-72 ಎಂದು ಮತ್ತು ಕಾಳಿಂಗ ಸರ್ಪ ವಿಷಕ್ಕೆ ಏ-76 ಎಂದು ರಹಸ್ಯ ಸಂಕೇತ ನೀಡಲಾಗಿದೆ.  ಅರ್ಧ ಲೀಟರ್ ಹಾವಿನ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಬೆಲೆ ಇದೆ. ಹೀಗಾಗಿ ಕಳೆದ ಆರೇಳು ವರ್ಷಗಳಿಂದಲೂ ಈ ಡ್ರಗ್‍ಗೆ ಭಾರಿ ಬೇಡಿಕೆ ಇದೆ. ಇವುಗಳ ಜೊತೆ ರೇವ್ ಪಾರ್ಟಿಗಳಲ್ಲಿ ತುಂಬಾ ಬೇಡಿಕೆ ಇರುವ ಡ್ರಗ್ಸ್‍ಗಳೆಂದರೆ ಎಕ್ಸ್‍ಟಸಿ ಮತ್ತು ಕೊಕೈನ್. ಹೊಸ ವರ್ಷ ಮತ್ತು ಪ್ರೇಮಿಗಳ ದಿನಾಚರಣೆಯಂಥ ಮೋಜು ಮಸ್ತಿ ಪಾರ್ಟಿಗಳಲ್ಲಿ ಇವುಗಳ ಮಾರಾಟ ಶೇಕಡ ಹತ್ತರಷ್ಟು ಹೆಚ್ಚಾಗುತ್ತದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin