ಹೊಸ ವರ್ಷದ ಸಂಭ್ರಮಾಚರಣೆ ಮೇಲೆ ಭಯೋತ್ಪಾದಕರ ಕರಿನೆರಳು : ದೇಶದಾದ್ಯಂತ ಕಟ್ಟೆಚ್ಚರ

Spread the love

Terrorism-01

ನವದೆಹಲಿ, ಡಿ.31-ಹೊಸ ವರ್ಷದ ಸಂಭ್ರಮಾಚರಣೆಗೆ ದೇಶ ಸಡಗರದಿಂದ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಭಯೋತ್ಪಾದಕರ ವಿಧ್ವಂಸಕ ಕೃತ್ಯಗಳ ಆತಂಕವೂ ಎದುರುಗಾಗಿದೆ. ಭಾರತದ ಪ್ರಮುಖ ಪ್ರವಾಸಿ ತಾಣಗಳು, ಪ್ರೇಕ್ಷಣೀಯ ಸ್ಥಳಗಳು, ಕಡಲ ಕಿನಾರೆಗಳು ವಿದೇಶಿಯರು ಹೆಚ್ಚಾಗಿ ಸೇರುವ ಕ್ಲಬ್‍ಗಳು ಮತ್ತು ರೆಸಾರ್ಟ್‍ಗಳು, ಜನದಟ್ಟಣೆ ಇರುವ ಜಾಗಗಳು, ಮಾರುಕಟ್ಟೆ ಪ್ರದೇಶಗಳು, ಶಾಪಿಂಗ್ ಮಾಲ್‍ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಲಿದ್ದಾರೆ ಎಂಬ ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಮುಖ ನಗರಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಪ್ರವಾಸಿಗರ ರಕ್ಷಣೆಗಾಗಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಕಮ್ಯಾಂಡೋಗಳೂ ಸೇರಿದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಇಸ್ರೇಲ್ ಎಚ್ಚರಿಕೆ :

ಇದೇ ವೇಳೆ ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ, ಭಾರತದ ಪ್ರವಾಸದಲ್ಲಿರುವ ತನ್ನ ನಾಗರಿಕರಿಗೆ ಎಚ್ಚರದಿಂದಿರಲು ಇಸ್ರೇಲ್ ಸೂಚನೆ ನೀಡಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ. ಭಾರತದ ವಾಯುವ್ಯ ಭಾಗಗಳಲ್ಲಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕರು ದಾಳಿ ನಡೆಸುವ ಆತಂಕವಿದ್ದು, ಪ್ರವಾಸದಲ್ಲಿರುವ ಇಸ್ರೇಲಿಗರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಇಸ್ರೇಲ್ ಪ್ರಧಾನಮಂತ್ರಿಯವರ ಕಾರ್ಯಾಲಯ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಭಯೋತ್ಪಾದನೆ ನಿಗ್ರಹ ನಿರ್ದೇಶನಾಲಯ ಸೂಚನೆ ನೀಡಿದೆ.
ಭಾರತ ಪ್ರವಾಸ ಕೈಗೊಳ್ಳಲು ಉದ್ದೇಶಿಸಿರುವ ತನ್ನ ನಾಗರಿಕರು ಯೋಜನೆಯನ್ನು ಮುಂದೂಡುವಂತೆ ತಿಳಿಸಲಾಗಿದೆ. ವಿದೇಶಿ ಪ್ರವಾಸಿಗರು ಹೆಚ್ಚಾಗಿ ಸೇರುವ ಸಮುದ್ರ ತೀರಗಳು ಮತ್ತು ಕ್ಲಬ್‍ಗಳ ಮೇಲೆ ದಾಳಿ ನಡೆಯಲಿದೆ ಎಂಬ ಗುಪ್ತಚರ ಮಾಹಿತಿಯು ಇಸ್ರೇಲ್‍ಗೆ ಲಭಿಸಿದೆ.

ನಿರ್ದಿಷ್ಟವಾಗಿ ಗೋವಾ, ಪುಣೆ, ಮುಂಬೈ, ಕೊಚ್ಚಿಗಳಂಥ ಜನಪ್ರಿಯ ರಜೆ ಪ್ರವಾಸಿ ತಾಣಗಳು ಭಯೋತ್ಪಾದಕರ ಆಕ್ರಮಣದ ಕೇಂದ್ರ ಬಿಂದುಗಳಾಗಲಿದ್ದು, ವಿಧ್ವಂಸಕ ಕೃತ್ಯಗಳ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಲಾಗಿದೆ.  ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಯ ವಕ್ತಾರರು ಸಹ ತಮ್ಮ ನಾಗರಿಕರಿಗೆ ನೀಡಲಾಗಿರುವ ಎಚ್ಚರಿಕೆ ಸಂದೇಶವನ್ನು ಖಚಿತಪಡಿಸಿದ್ದಾರೆ. ಈಗಾಗಲೇ ಅಮೆರಿಕ ಸಹ ಭಾರತದಲ್ಲಿರುವ ತನ್ನ ಪ್ರವಾಸಿಗರು ಮತ್ತು ಪ್ರಜೆಗಳಿಗೆ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin