ಹೊಸ ವಲಸೆ ನೀತಿ ಜಾರಿಗೊಳಿಸಲು ಸಜ್ಜಾಗಿರುವ ಜಗಮೊಂಡ ಟ್ರಂಪ್

Trump--01

ಸ್ಯಾನ್‍ಫ್ರಾನ್ಸಿಸ್ಕೋ, ಫೆ.11-ಏಳು ಮುಸ್ಲಿಂ ದೇಶಗಳ ಪ್ರಜೆಗಳಿಗೆ ನಿರ್ಬಂಧ ವಿಧಿಸುವ ಪ್ರಯತ್ನಕ್ಕೆ ನ್ಯಾಯಾಲಯಗಳಿಂದ ತೀವ್ರ ಹಿನ್ನಡೆ ಅನುಭವಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹಠಮಾರಿತನ ಪರಮಾವಧಿ ಎಂಬಂತೆ ಬ್ರಾಂಡ್ ನ್ಯೂ (ಹೊಸ) ವಲಸೆ ಕಾರ್ಯಕಾರಿ ನೀತಿಯನ್ನು ಜಾರಿಗೊಳಿಸಲು ಗಂಭೀರ ಪರಿಶೀಲನೆ ನಡೆಸಿದ್ದಾರೆ.  ಆಂಡ್ರ್ಯೂಸ್ ಏರ್‍ಪೋರ್ಸ್ ಬೇಸ್‍ನಿಂದ ಫ್ಲಾರಿಡಾಗೆ ಏರ್‍ಪೋರ್ಸ್ ಒನ್ ವಿಮಾನದಲ್ಲಿ ತಮ್ಮೊಂದಿಗಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಪ್ರಜೆಗಳನ್ನು ನಿರ್ಬಂಧಿಸುವ ಹೊಸ ನೀತಿಯನ್ನು ಜಾರಿಗೊಳಿಸಲಾಗುವುದು. ಆ ಆದೇಶಕ್ಕೆ ಶೀಘ್ರದಲ್ಲಿ ತಾವು ಸಹಿ ಹಾಕುವುದಾಗಿ ಹೇಳುವ ಮೂಲಕ ತಮ್ಮ ಮೊಂಡುತನ ಪ್ರದರ್ಶಿಸಿದ್ದಾರೆ.

ನಾವು ಈ ಕಾನೂನು ಸಮರದಲ್ಲಿ ಗೆದ್ದೇ ಗೆಲ್ಲುತ್ತೇವೆ. ಕೆಲವು ತೊಡಕುಗಳಿಂದ ನಮಗೆ ವಿಘ್ನಗಳು ಉಂಟಾದವು. ಆದರೂ ನಾವು ಧೃತಿಗೆಡುವುದಿಲ್ಲ. ಹೊಸ ವಲಸೆ ನಿರ್ಬಂಧ ಕಾರ್ಯಕಾರಿ ಆದೇಶ ಸೇರಿದಂತೆ ಕೆಲವು ಆಯ್ಕೆಗಳು ನಮ್ಮ ಮುಂದಿವೆ ಎಂದು ಅವರು ಹೇಳಿದ್ದಾರೆ.   ಏಳು ಮುಸ್ಲಿಂ ದೇಶಗಳ ಪ್ರಜೆಗಳಿಗೆ ನಿರ್ಬಂಧ ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ವಿವಾದಿತ ಆದೇಶವನ್ನು ಯಥಾಸ್ಥಿತಿಗೆ ತರಲು ಅಮೆರಿಕದ ಮೇಲ್ಮನವಿಗಳ ನ್ಯಾಯಾಲಯವೊಂದು ನಿರಾಕರಿಸಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಈ ವಿಷಯದಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ವಿರುದ್ಧ ನಿರಂತರ ಕೆಂಡ ಕಾರುತ್ತಿದ್ದ ಟ್ರಂಪ್‍ಗೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿತ್ತು.

ಸ್ಯಾನ್‍ಫ್ರಾನ್ಸಿಸ್ಕೋದ ಫೆಡರಲ್ ಅಪೀಲ್ಸ್ ಕೋರ್ಟ್‍ನ ಮೂವರು ನ್ಯಾಯಾಧೀಶರ ಪೀಠ, ಟ್ರಂಪ್‍ರ ವಿವಾದಾತ್ಮಕ ವಲಸೆ ಆದೇಶವನ್ನು ಯಥಾಸ್ಥಿತಿ ಜಾರಿಗೆ ತರಲು ನಿರಾಕರಿಸಿತು. ಅಲ್ಲದೇ ಇದನ್ನು ಪುನರ್ ಪರಾಮರ್ಶೆ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕಿತು.   ದೇಶದೊಳಗೆ ಇಸ್ಲಾಂ ಭಯೋತ್ಪಾದಕರ ಪ್ರವೇಶ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂಬ ಟ್ರಂಪ್ ವಾದಕ್ಕೆ ನ್ಯಾಯಾಲಯ ಮನ್ನಣೆ ನೀಡಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin