1ಕೆಜಿ 800 ಗ್ರಾಂ ಚಿನ್ನಾಭರಣ ಕದ್ದು ಕಳ್ಳನ ಕಥೆ ಕಟ್ಟಿದ್ದ ಖತರ್ನಾಕ್ ಮನೆ ಸೊಸೆ..!

Sose-025

ದೊಡ್ಡಬಳ್ಳಾಪುರ,ಮಾ.2-ಪಟ್ಟಣದ ಶಾಂತಿನಗರದಲ್ಲಿ ತೀವ್ರ ಕುತೂಹಲ ಕೆರಳಿಸಿ ಜನರಲ್ಲಿ ಆತಂಕ ಮೂಡಿಸಿದ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದು , ಮನೆಯ ಸೊಸೆಯೇ ಕಳ್ಳತನ ಮಾಡಿ ನಾಟಕವಾಡಿದ ಬೆಚ್ಚುಬೀಳುವ ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ.   ಕಳೆದ ಫೆ.19ರಂದು ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ಬಂದ ಮಹಿಳೆಯೊಬ್ಬಳು ನನ್ನನ್ನು ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದ ಬಗ್ಗೆ ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ಮಾರನೆದಿನ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಿ ತನಿಖೆ ಕೈಗೊಂಡರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ದರೋಡೆ ಮಾಡಲಾಗಿದೆ ಎಂಬ ಘಟನೆ ಪೊಲೀಸರಿಗೂ ಹೊಸ ಸವಾಲಾಗಿ ಪರಿಣಮಿಸಿತ್ತು. ಛಲ ಬಿಡದೆ ಎಲ್ಲ ರಸ್ತೆಯಲ್ಲಿದ್ದ ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ನಡೆಸಿ, ಆ ದಿನ ಈ ಪ್ರದೇಶದಲ್ಲಿ ಮೊಬೈಲ್ ಟವರ್‍ಗಳನ್ನು ಪರಿಶೀಲಿಸಿ ಕರೆಗಳ ಮಾಹಿತಿಯನ್ನು ಕೂಡ ಪಡೆಯಲಾಗಿತ್ತು.   ದರೋಡೆಕೋರರು ಕಾವ್ಯಳ ಮೇಲೆ ಯಾವುದೇ ಹಲ್ಲೆ ಮಾಡದಿರುವುದರ ಬಗ್ಗೆ ಪೊಲೀಸರಿಗೆ ಮೊದಲೇ ಅನುಮಾನವಿತ್ತು. ಕಳೆದ ಎರಡು ದಿನಗಳ ಹಿಂದೆ ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಹೊರಬಿತ್ತು. ಇದನ್ನು ತಿಳಿದು ಕೆಲ ಸಮಯ ಪೊಲೀಸರೇ ತಬ್ಬಿಬ್ಬಾದರು.

ದರೋಡೆ ನಾಟಕವಾಡಿ ಸುಮಾರು 1 ಕೆಜಿ 800 ಗ್ರಾಂ ಚಿನ್ನಾಭರಣವನ್ನು ಪಟ್ಟಣದ ದರ್ಗಾಬೋಗನಹಳ್ಳಿಯ ಮೆಹಬೂಬ್ ಪಾಷ ಎಂಬುವರ ಮನೆಯಲ್ಲಿ ಇದನ್ನು ಅಡಗಿಸಿಟ್ಟಿದ್ದ ಕಾವ್ಯಾಳ ನಿಜಬಣ್ಣ ಬಯಲಾಯಿತು. ತಡಮಾಡದೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೆಹಬೂಬ್ ಪಾಷನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇತ್ತ ಕಾವ್ಯಾಳೂ ಕೂಡ ಸೆರೆಮನೆ ಸೇರಿದ್ದಾಳೆ. ಆದರೆ ಮನೆಯ ಸೊಸೆಯೇ ಈ ರೀತಿ ನಾಟಕವಾಡಲು ಕಾರಣ ಏನೆಂಬುದು ಈಗ ಮನೆಯವರನ್ನು ಕಾಡುತ್ತಿದೆ. ಆತಂಕ ಹುಟ್ಟಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin