1 ಚಾಕೋಲೆಟ್ಗೆ 1,800 ರೂ..! : ಆನ್ಲೈನ್ನಲ್ಲಿ ಗಾಂಜಾ ಚಾಕೋಲೆಟ್ ಮಾರುತ್ತಿದ್ದ ಡಾಕ್ಟರ್ ಅಂದರ್
ಹೈದರಾಬಾದ್, ಜ.30- ವೈದ್ಯೋ ನಾರಾಯಣ ಹರಿ: ಎನ್ನುತ್ತಾರೆ. ಆದರೆ ಗಾಂಜಾ ಚಾಕೋಲೆಟ್ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಿ ಜನರನ್ನು ಮಾದಕವ್ಯಸನಕ್ಕೆ ದೂಡುತ್ತಿದ್ದ ಖತರ್ನಾಕ್ ವೈದ್ಯನೊಬ್ಬನನ್ನು ಹೈದರಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಡಾ. ಶುಜತ್ ಅಲಿ ಖಾನ್ (35) ಬಂಧಿತ ಡ್ರಗ್ಸ್ ದಂಧೆಯ ವೈದ್ಯ. ತಮಿಳುನಾಡಿನ ವೆಲ್ಲೂರಿಗೆ ಪೂರೈಕೆಯಾಗಲಿದ್ದ 45 ಮಾರಿಜುನಾ ಚಾಕೋಲೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತ ಮಾರಿಜುನಾ ಲೇಪಿತ ಚಾಕೋಲೆಟ್ಗಳನ್ನು ಸಿದ್ಧಪಡಿಸಿ ಅದನ್ನು ಆನ್ಲೈನ್ನಲ್ಲಿ ಒಂದು ತುಣುಕಿಗೆ 1,800 ರೂ.ಗಳಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಮೆಡಿಕಲ್ ಕಾಲೇಜಿನೊಂದರಲ್ಲಿ 2006ರಲ್ಲಿ ಎಂಬಿಬಿಎಸ್ ಪದವಿ ಪಡೆದು 2014ರವರೆಗೆ ಸರ್ಕಾರಿ ಒಡೆತನದ ನಿಜಾಮ್ಸಾಗರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎನ್ಐಎಂಎಸ್) ಕಾರ್ಯನಿರ್ವಹಿಸುತ್ತಿದ್ದ ಈತ ನಂತರ ತನ್ನದೇ ಆದ ವಾಣಿಜ್ಯ ಚಟುವಟಿಕೆಗಳನ್ನು ಆರಂಭಿಸಿದ್ದ. ಅಲ್ಲದೇ ಜಿಮ್ಗಳಲ್ಲಿ ಹೆಲ್ತ್ ಕನ್ಸಲ್ಟಂಟ್ ಆಗಿ ಆತ ಕಾರ್ಯನಿರ್ವಹಿಸುತ್ತಿದ್ದ.
ರಾಚೂಕೊಂಡ ಪೊಲೀಸ್ ವಿಭಾಗದ ವಿಶೇಷ ಕಾರ್ಯಾಚರಣೆಗಳ ತಂಡವು ಕಳೆದ ಕೆಲವು ದಿನಗಳಿಂದ ಈತನ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿ ಬಲೆಗೆ ಕೆಡವಿಕೊಂಡಿತು. ಈತ ಕಳೆದ ಎರಡು ವರ್ಷಗಳಿಂದ ಮಾರಿಜುನಾ ಪುಡಿಗಳನ್ನು ಚಾಕೋಲೇಟ್ಗೆ ಸೇರಿಸಿ ಚಾಕೋಲೆಟ್ ತಯಾರಿಸುತ್ತಿದ್ದ ಹಾಗೂ ತನ್ನ ಇನ್ಸ್ಟಾಗ್ರಾಮ್ ಖಾತೆ ಮೂಲಕ ಸಣ್ಣ ತುಣುಕುಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರಿಜುನಾ ಮಿಶ್ರಣದ ಪ್ರಮಾಣದ ಆಧಾರದ ಮೇಲೆ ವಿವಿಧ ಚಾಕೋಲೆಟ್ಗಳನ್ನು ಲೆಬಲ್ ಮಾಡಲಾಗುತ್ತಿತ್ತು. ಇವುಗಳ ಬೆಲೆ ಒಂದು ತುಣುಕಿಗೆ 500 ರೂ.ಗಳಿಂದ 1,800 ರೂ.ಗಳವರೆಗೆ ಇತ್ತು. ಜಿಮ್ಗಳಲ್ಲಿ ವ್ಯಾಯಾಮ ಮಾಡುವವರಿಗೆ ಎಷ್ಟು ಪ್ರಮಾಣದಲ್ಲಿ ಪ್ರೊಟೀನ್ ಸೇವಿಸಬೇಕೆಂದು ಸಲಹೆ ನೀಡುತ್ತಿದ್ದ ಶುಜತ್ ಖಾನ್ ದೇಶಾದ್ಯಂತ 3,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು ಇ-ಮೇಲ್ ಮೂಲಕ ತನ್ನ ವಹಿವಾಟು ನಡೆಸುತ್ತಿದ್ದ. ತನ್ನ ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ದ ಅರೋಪದ ಮೇಲೆ ಸೈಯದ್ ಶಾಹೀದ್ ಹುಸೇನ್ (33) ಎಂಬಾತನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಎಲ್ಇಡಿ ಲೈಟ್ಗಳ ಅಡಿ ತನ್ನ ಮೂರು ಬೆಡ್ರೂಂಗಳ ಕೊಠಡಿಯೊಳಗೆ ಈತ ಮಾರಿಜುನಾ ಬೆಳೆಯುತ್ತಿದ್ದ. 40 ಕುಂಡಗಳಲ್ಲಿದ್ದ ಒಂಭತ್ತು ಕೆಜಿ ಮಾರಿಜುನಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
< Eesanje News 24/7 ನ್ಯೂಸ್ ಆ್ಯಪ್ >