ತಿ.ನರಸೀಪುರ,ಜು.13- ವ್ಯಕ್ತಿಯೊಬ್ಬರು 50 ರೂ. ಆಸೆಗಾಗಿ 1.50 ಲಕ್ಷ ರೂ.ಗಳನ್ನು ಕಳೆದು ಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮೈಸೂರಿನ ನಜರ್‍ಬಾದ್ ನಿವಾಸಿ ಅಬ್ದುಲ್ ಖಾದರ್(60) ಎಂಬುವರೇ ಹಣ ಕಳೆದುಕೊಂಡವರು.
ಅಬ್ದುಲ್ ಖಾದರ್ ಪಟ್ಟಣದ ಆಲಗೂಡು ಸಮೀಪವಿರುವ ಎನ್‍ಕೆಎಫ್ ಪಬ್ಲಿಕ್ ಶಾಲೆಯಲ್ಲಿ ಅಲ್ಯುಮಿನಿಯಮ್ ವಿಂಡೋಸ್ ಕೆಲಸ ಮಾಡುತ್ತಿದ್ದು, ಶಾಲೆಯ ಸಂಸ್ಥಾಪಕರು ಮಾಡಿದ್ದ ಕೆಲಸಕ್ಕೆ 80 ಸಾವಿರ ರೂ.ಗಳು ಹಾಗೂ ಬಾಕಿ ಕೆಲಸದ ಮುಂಗಡ 70 ಸಾವಿರ ರೂ.ಗಳು ಒಟ್ಟಾರೆ 1.50 ಲಕ್ಷ ರೂ.ಗಳಿಗೆ ಚೆಕ್ ನೀಡಿದ್ದರು.
ನೀಡಲಾದ ಚೆಕ್ಕನ ಹಣವನ್ನು ಕೆನರಾ ಬ್ಯಾಂಕಿನಲ್ಲಿ ನಗದೀಕರಿಸಿಕೊಂಡು ತಮ್ಮ ಆಕ್ಸಿಸ್ ಸ್ಕೂಟರ್‍ನ ಡಿಕ್ಕಿಯಲ್ಲಿರಿಸಿಕೊಂಡು ಮೈಸೂರಿನತ್ತ ತೆರಳುತ್ತಿದ್ದರು. ಈ ವೇಳೆ ಇವರನ್ನು ಹಿಂಬಾಲಿಸುತ್ತಿದ್ದ ಕೆಲ ಅಪರಿಚಿತರು ಕಬಿನಿ ನದಿಯ ನೂತನ
ಸೇತುವೆ ಬಳಿ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಖಾದರ್ ಡಿಕ್ಕಿಯಲ್ಲಿದ್ದ ತಮ್ಮ ಜರ್ಕೀನ್ ತೆಗೆದುಕೊಳ್ಳಲು ಮುಂದಾದ ಸಂದರ್ಭದಲ್ಲಿ ಅಪರಿಚಿತರು 50 ರೂ.ಗಳ ನೋಟು ಬಿದ್ದಿವೆ ಎಂದು ಅವರ ಗಮನ ಬೇರೆಡೆ ಸೆಳೆದಿದ್ದಾರೆ.
ಅಬ್ದುಲ್ ಖಾದರ್ ಬಿದ್ದಿರುವ ಹಣ ತಮ್ಮದೇ ಇರಬಹುದೆಂದು ಅದನ್ನು ತೆಗೆದುಕೊಳ್ಳಲು ಹೋದಾಗ ಬೈಕ್‍ನ ಡಿಕ್ಕಿಯಲ್ಲಿದ್ದ 1.50 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಖಾದರ್ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.